ಬಿಡದಿ : ಬೀದಿ ನಾಯಿಗಳ ಉಪಟಳ ತಪ್ಪಿಸುವಲ್ಲಿ ಪುರಸಭೆ ಕ್ರಮ ವಹಿಸಲಾಗುತ್ತಿದ್ದು, ಎಲ್ಲ ವಾರ್ಡ್‌ಗಳಲ್ಲಿ ನಾಯಿಗಳನ್ನು ಹಿಡಿಯಲಾಗುವುದು ಎಂದು ಪುರಸಭಾ ಅಧ್ಯಕ್ಷ ಹರಿಪ್ರಸಾದ್ ತಿಳಿಸಿದರು.
ಪಟ್ಟಣದಲ್ಲಿ ಪುರಸಭೆ ಮೊದಲ ಹಂತದಲ್ಲಿ 600 ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಲಸಿಕಾ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಪಟ್ಟಣದ ಮುಖ್ಯ ರಸ್ತೆ, ಮನೆ ಮುಂದೆ ಹಾಗು ಖಾಲಿ ನಿವೇಶನಗಳಲ್ಲಿ ಬೀಡು ಬಿಟ್ಟಂತಹ ಬೀದಿ ನಾಯಿಗಳು ಹಲವರ ಮೇಲೆ ದಾಳಿ ನಡೆಸಿದ್ದವು. ಆಹಾರದ ಆಸೆಗಾಗಿ ಜನರ ಮೇಲೆ ಮುಗಿಬಿದ್ದ ಪರಿಣಾಮ ಅನೇಕರು ಗಾಯಗೊಂಡಿದ್ದರು. ಈ ಬಗ್ಗೆ ಪುರಸಭೆಗೆ ವ್ಯಾಪಕ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಬೀದಿ ನಾಯಿ ಹಾವಳಿ ತಡೆಗೆ ಮುಂದಾಗಿದ್ದು, ಮುಂದಿನ ಎರಡು ತಿಂಗಳು ಕಾರ್ಯಾಚರಣೆ ನಡೆಯಲಿದೆ ಎಂದರು.
ಹೆಚ್ಚಿನ ಉಪಟಳ ನೀಡುತ್ತಿರುವ ಪ್ರದೇಶಗಳ ಬಗ್ಗೆ ನಾಗರಿಕರು ದೂರು ನೀಡಿದರೆ, ಪ್ರಥಮ ಆದ್ಯತೆ ಮೇರೆಗೆ ನಾಯಿ ಹಿಡಿಯಲಾಗುವುದು. ಪಟ್ಟಣವನ್ನು ರೇಬಿಸ್ ಮುಕ್ತಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯ. ಬೀದಿನಾಯಿಗಳಿಂದ ರಕ್ಷಿಸಿಕೊಳ್ಳುವ ಬಗ್ಗೆ ಮುಂದಿನ ದಿನಗಳಲ್ಲಿ ಬ್ಯಾನರ್‌ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಪುರಸಭಾ ಮುಖ್ಯಾಧಿಕಾರಿ ಕೆ.ಜಿ.ರಮೇಶ್ ಮಾತನಾಡಿ, ಸತತ ಎರಡು ತಿಂಗಳಿಂದ ನಿತ್ಯ ಬೆಳಗ್ಗೆ 9ರ ಸುಮಾರಿಗೆ ಬೀದಿ ನಾಯಿಗಳನ್ನು ಬಲೆ ಮೂಲಕ ಸೆರೆಹಿಡಿದು ಆಧುನಿಕ, ಸುಧಾರಿತ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ ಆ್ಯಂಟಿ ರೇಬಿಸ್ ಲಸಿಕೆ ನೀಡಲಾಗುತ್ತದೆ. ರಾಮನಗರದ ರಾಮದೇವರ ಬೆಟ್ಟದ ಬಳಿಯ ಸಂತಾನ ಶಕ್ತಿ ಹರಣ ಚಿಕಿತ್ಸಾ ಕೇಂದ್ರದಲ್ಲಿ ಸೆರೆ ಹಿಡಿದ ಶ್ವಾನಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಚಿಕಿತ್ಸೆ ಬಳಿಕ ನಾಯಿಗಳನ್ನು ಸೆರೆ ಹಿಡಿದ ಜಾಗಕ್ಕೆ ಬಿಡಲಾಗುತ್ತದೆ. ಹಾಗಾಗಿ ಸಾಕು ನಾಯಿಗಳನ್ನು ಸದ್ಯದ ಮಟ್ಟಿಗೆ ಹೊರಗಡೆ ಬಿಡದಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.