ಸಮಾಜದಲ್ಲಿನ ಮೌಢ್ಯತೆ ತೊಡೆದು ಹಾಕಿದ ದೇವಪುರುಷ ಸಂತ ಸೇವಾಲಾಲ್ ; ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಬಣ್ಣನೆ

15CBP2Sevalal jayanti
Published on

ಚಿಕ್ಕಬಳ್ಳಾಪುರ : ಸಂತ ಸೇವಾಲಾಲ್ ಸಮಾಜದ ಉದ್ಧಾರಕ್ಕೆ ಉದಯಿಸಿದ ದೇವಪುರುಷ ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಬಣ್ಣಿಸಿದರು.

ಜಿಲ್ಲಾಡಳಿತ ಭವನದಲ್ಲಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿಯಲ್ಲಿ ಮಾತನಾಡಿ, ಸಮಾಜದಲ್ಲಿನ ಮೌಢ್ಯತೆ ತೊಡೆದು ಹಾಕಿದ ಸಂತ ಸೇವಾಲಾಲ್ ಸತ್ಯ, ಅಹಿಂಸಾ ತತ್ವವನ್ನು ಬೋಧಿಸಿದ ಪವಾಡ ಪುರುಷ. ಇವರ ಆದರ್ಶ ಸಂದೇಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಮೂಢನಂಬಿಕೆಯನ್ನು ಹೋಗಲಾಡಿಸುವ ಜತೆಗೆ ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿ ಸಾಧಿಸಿದರೇ ಉನ್ನತ ಸ್ಥಾನಕ್ಕೆ ಏರಬಹುದು ಎಂದರು.

ಜಚನಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಅಶ್ವತ್ಥ್ ಮಾತನಾಡಿ, ದಣಿದು ಬಂದವರಿಗೆ ನೀರು, ಹಸಿದು ಬಂದವರಿಗೆ ಅನ್ನ ಹಾಗೂ ಬೇಡಿ ಬಂದವರಿಗೆ ಸಹಾಯ ಮಾಡುವುದರ ಬಗೆಗಿನ ಮಹತ್ವವನ್ನು ತಿಳಿಸಿ ಕೊಟ್ಟಂತಹ ಮಹನೀಯ ಸಂತ ಸೇವಾಲಾಲ್. ಕಾಡಿನಲ್ಲಿ ಹಸು ಮೇಯಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ಕಲ್ಲುಬಂಡೆಗಳನ್ನು ನಗಾರಿಯನ್ನಾಗಿಸಿಕೊಂಡು ತಾಳೆಗರಿಯನ್ನು ತಾಳವಾಗಿಸಿ ಹಾಡು ಕಟ್ಟುತ್ತಿದ್ದರು ಮತ್ತು ಪ್ರಕೃತಿಯಲ್ಲಿನ ಪ್ರಾಣಿ ಪಕ್ಷಿಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದರು ಎಂಬ ಮಾತಿದೆ ಎಂದರು. ಸೇವಾಲಾಲ್ ಜಯಂತಿಯ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ.ಎನ್.ಶೇಷಾದ್ರಿ, ಚಂದ್ರಪ್ಪ, ನರಸಿಂಹಯ್ಯ, ನರಸಿಂಹನಾಯಕ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net