ಬದುಕಿನ ಮಾರ್ಗಸೂಚಿ ಭಗವದ್ಗೀತೆ

Sandesha Lead
Published on

ಸುಗುಣೇಂದ್ರ ಶ್ರೀ ಆಶೀರ್ವಚನ

ಸಂತ ಸಂದೇಶ-ಸನ್ಮಾನ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಯೋಗ್ಯತೆ ಇಲ್ಲದೆ ಏನನ್ನೂ ಪಡೆಯಲಾಗದು. ದುಡಿದು ಹಣ ಗಳಿಸಬೇಕೇ ಹೊರತು ತಂದೆಯ ಸಂಪತ್ತು ಅನುಭವಿಸುತ್ತಿದ್ದರೆ ಜೀವನ ಸಾರ್ಥಕವಾಗದು. ಅಸ್ತ್ರ-ಶಸ್ತ್ರದಿಂದ ಯುದ್ಧ ಗೆಲ್ಲಲು ಸಾಧ್ಯವಿಲ್ಲ. ಅದು ಮನುಷ್ಯನ ನಾಶಕ್ಕೆ ಕಾರಣವಾಗುವುದು. ಶಾಸ್ತ್ರ (ವಿಚಾರ, ಜ್ಞಾನ)ದಿಂದ ಜಗವನ್ನೇ ಗೆಲ್ಲಬಹುದು. ವಿಶ್ವತೋಮುಖವಾಗಿರುವ ಭಗವದ್ಗೀತೆಯು ಸದ್ಬುದ್ಧಿ ಕರುಣಿಸುವ ಹಾಗೂ ಆತ್ಮೋದ್ಧಾರ ಮಾಡಿಕೊಳ್ಳಲು ಎಲ್ಲರ ಬದುಕಿಗೆ ಮಾರ್ಗಸೂಚಿ ಗೈಡ್​ ಆಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

222
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದಿಂದ ಮುಂದುವರಿದ ಮಾಸಿಕ ಬೃಹತ್​ ಗೀತೋತ್ಸವದಲ್ಲಿ ಸೋಮವಾರ (ನ.10) ಆಯೋಜಿಸಿದ್ದ ಸಂತ- ಸಂದೇಶ, ಸಂತ -ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಕೃಷ್ಣನ ಗೀತೆಯ ಸಂದೇಶದ ಬೆಳಕಿನಲ್ಲಿ ಜಗ ಸಾಗುವಂತಾಗಬೇಕು. ಅದನ್ನು ಜನಮಾನಸಕ್ಕೆ ತಲುಪಿಸಲು ಗೀತೋತ್ಸವ ಆಯೋಜಿಸಲಾಗಿದೆ ಎಂದರು.

ಸವೋರ್ತ್ತಮ ಶಾಸ್ತ್ರ ಭಗವದ್ಗೀತೆ

111
ಸಂತ ಸಂದೇಶ ನೀಡಿದ ಕೋಲಾರ ತಂಬಿಹಳ್ಳಿ ಮಾಧವತೀರ್ಥ ಸಂಸ್ಥಾನದ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರು ಮಾತನಾಡಿ, ಮಠಾಭಿಮಾನ ಬಿಡಿ-ಮತಾಭಿಮಾನ ಉಳಿಸಿ ಎಂದು ನಾಲ್ಕು ವರ್ಷದ ಹಿಂದೆ ಘೋಷಿಸಿದ್ದೆ. ಅದಕ್ಕೆ ಸುಮಾರು 8 ಲಕ್ಷಕ್ಕೂ ಅಧಿಕ ಜನ ಕೈಜೋಡಿಸಿದ್ದರು. ಅರ್ಥವಾಗದ ಅನ್ಯ ಶಾಸ್ತ್ರಗಳ ಓದಿ ಯಾಕೆ ಒದ್ದಾಡುತ್ತೀರಿ? ಅರ್ಥ ಸಹಿತವಾಗಿ ಶ್ರೀಕೃಷ್ಣನು ಅರ್ಜುನನ ಮೂಲಕ ಸಾರಿರುವ ಸವೋರ್ತ್ತಮವಾದ ಶಾಸ್ತ್ರ ಭಗವದ್ಗೀತೆಯಾಗಿದೆ. ಜಗತ್ತಿನ ಎಲ್ಲ ಶಾಸ್ತ್ರಗಳೂ ದೇವಕಿ ಪುತ್ರ ಶ್ರೀಕೃಷ್ಣ ಸಾರಿದ ಭಗವದ್ಗೀತೆಯಲ್ಲೇ ಇದೆ. ನಾವೆಲ್ಲರೂ ಕೃಷ್ಣ ಸತ್ಯರಾಗಿರಬೇಕು ಎಂದರು.

ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ

ಉದ್ಯಮಿ ಗೋಪಾಡಿ ಶ್ರೀನಿವಾಸ್​ ರಾವ್​ ಹಾಗೂ ಇಂಜಿನಿಯರ್​ ನಾಗರಾಜ್​ ರಾವ್​ ಅವರಿಗೆ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಡುಪಿ ಎಚ್​ಪಿ ಗ್ಯಾಸ್​ನ ಬಾಲಾಜಿ ವಿಷ್ಣು ಆಚಾರ್ಯ, ವೈ. ಮೋಹನ ರಾವ್​ ಮಾತನಾಡಿದರು. ಸಿಎ ಗಣೇಶ್​ ಬಿ. ಕಾಂಚನ್​, ಉದ್ಯಮಿ ವೈ. ಧೀರಜ್​ ರಾವ್​, ಶ್ರೀನಿಧಿ ಗ್ರಾಫಿಕ್​ ಟೆಕ್​ನ ಯತೀಶ ಚಂದ್ರ, ನಿವೃತ್ತ ಪತ್ರಕರ್ತ ಎಸ್​. ನಿತ್ಯಾನಂದ ಪಡ್ರೆ ಉಪಸ್ಥಿತರಿದ್ದರು.

ಪುತ್ತಿಗೆ ಮಠದ ಶಿಷ್ಯ ಸಮರ್ಥ ಜೋಶಿ ವೇದಘೋಷ ಪಠಿಸಿದರು. ಕುಮಾರಿ ಮಾಧ್ವಿ ಪುರಂದರದಾಸರ ಕೀರ್ತನೆ ಹಾಡಿದರು. ನಿವೃತ್ತ ಪ್ರಾಂಶುಪಾಲ ಕೆ.ಎ. ಕೃಷ್ಣಮೂರ್ತಿ ಭಟ್​ ಸ್ವಾಗತಿಸಿದರು. ಪುತ್ತಿಗೆ ಮಠದ ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್​ ತಂತ್ರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​ ಸಹಕರಿಸಿದರು.

ಮೂರು ಪುಸ್ತಕ ಬಿಡುಗಡೆ

ಅಂಬಲಪಾಡಿಯ ಬ್ರಹ್ಮಗಿರಿ ಪ್ರಕಾಶನದ ಆಶ್ರಯದಲ್ಲಿ ವೈ.ಮೋಹನ ರಾವ್​ ಅವರು ತುಳು ಭಾಷೆಯಲ್ಲಿ ಶ್ಲೋಕಗಳ ಆರ್ಥ ಸಹಿತ ರಚಿಸಿರುವ ಶ್ರೀಮದ್ಭಗವದ್ಗೀತಾ ಪುಸ್ತಕವನ್ನು ಶ್ರೀಗಳು ಬಿಡುಗಡೆ ಮಾಡಿದರು. ಅಲ್ಲದೆ, ತಂಬಿಹಳ್ಳಿ ಮಠದ ಶ್ರೀಗಳು ಸಂಸ್ಕೃತದಲ್ಲಿ ರಚಿಸಿರುವ ಸಂಪೂರ್ಣ ಭಗವದ್ಗೀತಾ ಏಕ ಶ್ಲೋಕಿ ಹಾಗೂ ಪ್ರತಿ ಅಧ್ಯಾಯ ಸಾರ ಏಕ ಶ್ಲೋಕಿ ಗ್ರಂಥವನ್ನು ಸುಗುಣೇಂದ್ರ ಶ್ರೀ ಹಾಗೂ ಪುತ್ತಿಗೆ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು.

ಧರ್ಮದ ಬಗ್ಗೆ ಕಿಂಚಿತ್​ ಜ್ಞಾನ ಇಲ್ಲದವರೂ ಸಹ ಧರ್ಮದ ರಕ್ಷಣೆಯ ಬಗ್ಗೆ ಭಾರಿ ಮಾತನಾಡುವುದು ಕಂಡುಬರುತ್ತಿದೆ. ಮೊದಲು ಧರ್ಮದ ಮಹತ್ವ ಅರಿತು ಮಾತನಾಡಬೇಕು. ಅದಕ್ಕಾಗಿ ಭಗವದ್ಗೀತೆಯ ತಳಹದಿಯ ಅರಿವಿನ ಮೂಲಕ ಸನಾತನ ಧರ್ಮ, ದೇಶ ಹಾಗೂ ವಿಶ್ವದ ರಕ್ಷಣೆ ಆಗಬೇಕು. ಗೀತಾ ಜ್ಞಾನದ ಆಧಾರದಲ್ಲಿ ಜಾಗತಿಕವಾಗಿ ಸಂಘಟಿತವಾದರೆ ದ್ವೇಷ-ಕಲಹ, ಯುದ್ಧಗಳೂ ಘಟಿಸದು. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಶ್ರೀ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net