

ಉಡುಪಿ: ರಾಮ ಮೌಲ್ಯಗಳ ಸಂಕೇತ. ರಾಮಮಂದಿರ ನಿರ್ಮಾಣ ವಿರೋಧಿಸುವವರು ದೇಹದಿಂದ ಭಾರತೀಯರು ಹಾಗೂ ಮನಸ್ಸಿನಿಂದ ವಿದೇಶಿಗರು ಎಂದು ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪೇಜಾವರ ಮಠದಲ್ಲಿ ರಾಮಮಂದಿರ ನಿಧಿ ಸಮರ್ಪಣೆ ಅಂಗವಾಗಿ ಶನಿವಾರ ಆಯೋಜಿಸಲಾದ ಸಂತರ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸೋದೆ ಮಠ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಸಮಕಾಲೀನರಾಗಿರುವುದು ಜೀವನದ ಸೌಭಾಗ್ಯ. ಮಂದಿರ ಭಾರತೀಯ ವಿವಿಧ ಪರಂಪರೆಯ ಸಂಗಮವಾಗಬೇಕು. ಉತ್ತರ ಭಾರತದ ನಾಗರ ಶೈಲಿಯಲ್ಲಿ ಮಂದಿರ ನಿರ್ಮಾಣವಾಗಲಿದೆ. ದಕ್ಷಿಣ ಭಾರತ ಶೈಲಿಯಲ್ಲಿ ಉತ್ಸವಾದಿಗಳು ನಡೆಯಬೇಕು ಎಂದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಆನೆಗುಂದಿ ಮಠದ ಶ್ರೀ ಕಾಳಹಸ್ತೆ ೀಂದ್ರ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದರು.
ಕಾಣಿಯೂರು, ಸೋದೆ, ಪಲಿಮಾರು, ಪರ್ಯಾಯ ಶ್ರೀಗಳು ಮಠದ ವತಿಯಿಂದ ಪ್ರಥಮತಃ ಮಠದ ವತಿಯಿಂದ ತಲಾ 1 ಲಕ್ಷ ರೂ. ನಿಧಿ ಸಮರ್ಪಿಸಿದರು. ಆರೆಸ್ಸೆಸ್ ಕುಟುಂಬ ಪ್ರಬೋಧಿನಿ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಹಿಂಪ ಪ್ರಾಂತ ಕಾರ್ಯದರ್ಶಿ ಕೃಷ್ಣಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.
ವಾದಿರಾಜರು 5 ಶತಮಾನಗಳ ಹಿಂದೆ ಅಯೋಧ್ಯೆಯಿಂದ ಆಂಜನೇಯ ವಿಗ್ರಹ ತಂದು ಕೃಷ್ಣ ಮಠದಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಹೀಗಾಗಿ ಉಡುಪಿಗೂ ಅಯೋಧ್ಯೆಯೂ ಅವಿನಾಭಾವ ಸಂಬಂಧವಿದೆ.
-ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಪರ್ಯಾಯ, ಅದಮಾರು ಮಠ