ಇಂದಿನಿಂದ ಸಂತಡ್ಕ ಶ್ರೀಅರಸು ಸಂಕಲ ದೈವ ಕ್ಷೇತ್ರದ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ

Published on

ಮಂಜೇಶ್ವರ: ಕುಳೂರು ಸಂತಡ್ಕ ಶ್ರೀಅರಸು ಸಂಕಲ ದೈವ ಕ್ಷೇತ್ರದ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಜ.19ರಿಂದ 24ರ ವರೆಗೆ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕುಡುಪು ಬ್ರಹ್ಮಶ್ರೀ ನರಸಿಂಹ ತಂತ್ರಿ ಹಾಗೂ ಕುಳೂರು ಯೋಗೀಶ ಕಲ್ಯಾಣತ್ತಾಯರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಅರಸು ಸಂಕಲ ದೈವಕ್ಷೇತ್ರ ಆಡಳಿತ ಟ್ರಸ್ಟ್ ಮತ್ತು ಸೇವಾ ಸಮಿತಿ ಅಧ್ಯಕ್ಷ ಡಾ.ಎಂ.ಶ್ರೀಧರ ಭಟ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೊರೆಕಾಣಿಕೆ ಮೆರವಣಿಗೆ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 22ರಂದು ಬೆಳಗ್ಗೆ 8ರಿಂದ 8.30ರ ಮುಹೂರ್ತದಲ್ಲಿ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಬೆಳಗ್ಗೆ 10.30ರಿಂದ ಧಾರ್ಮಿಕ ಸಭೆ ನಡೆಯಲಿದೆ. ರಾತ್ರಿ 7ರಿಂದ ಶ್ರೀ ಅರಸು ಸಂಕಲ ತಮ್ಮ ದೈವಗಳ ನೇಮೋತ್ಸವ, ಒಲಸರಿ ಉತ್ಸವ ನಡೆಯಲಿದೆ. 24ರಂದು ಬೆಳಗ್ಗೆ 9ರಿಂದ ಶ್ರೀ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ, ಸಂಜೆ 6ರಿಂದ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವ, ರಾತ್ರಿ 9ರಿಂದ ಶ್ರೀ ಧೂಮಾವತಿ ಬಂಟ ದೈವಗಳ ಒಲಸರಿ ಉತ್ಸವ, ರಾತ್ರಿ 12ರಿಂದ ಶ್ರೀ ಕೊರತಿ ಗುಳಿಗ ದೈವಗಳ ಕೋಲೋತ್ಸವ, ಭಂಡಾರ ಇಳಿಯುವುದರೊಂದಿಗೆ ಸಮಾರಂಭ ಕೊನೆಗೊಳ್ಳಲಿದೆ.

ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಸಂತಡ್ಕ, ಉಪಾಧ್ಯಕ್ಷ ಕೃಷ್ಣ ಶೆಟ್ಟಿ ಕಲ್ಲಾಯಿ, ಅರವಿಂದಾಕ್ಷ ಭಂಡಾರಿ, ಕೋಶಾಧಿಕಾರಿ ಎಂ.ಜಿ. ನಾರಾಯಣ ರಾವ್, ಸದಸ್ಯರಾದ ಸಾಹಿತ್ ಶೆಟ್ಟಿ, ನಾರಾಯಣ ಭಂಡಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net