

ಉಡುಪಿ: ಪ್ರತಿ ಬಾರಿಯೂ ಕ್ರಿಸ್‌ಮಸ್ ಹಬ್ಬಕ್ಕೆ ವಿವಿಧ ಬಗೆಯ ವೈವಿಧ್ಯಮಯ ಸಂತಾಕ್ಲಾಸ್ ಹಾಗೂ ಮೇರಿ ಜನ್ಮಸ್ಥಾನ ಗೋದಲಿ ರಚನೆ ಮಾಡುವ ಕಲ್ಯಾಣಪುರದ ಟಿ.ಎ.ಎಂ ಹೈಸ್ಕೂಲ್ ಸಮೀಪದ ನಿವಾಸಿ ಓವನ್ ರೊಡ್ರಿಗಸ್ ಈ ಬಾರಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಸಂತಾಕ್ಲಾಸ್ ‘ಸ್ಟೇ ಸೇಫ್, ವೇರ್ ಮಾಸ್ಕ್’ ಸಂದೇಶ ನೀಡುವ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ.
ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಿಂದ ನಿವೃತ್ತಿ ಹೊಂದಿದ ಬಳಿಕ ಊರಿನಲ್ಲಿ ನೆಲೆಸಿರುವ ಚಿತ್ರ ಕಲಾವಿದರಾಗಿರುವ ರೊಡ್ರಿಗಸ್, 10 ವರ್ಷಗಳಿಂದ ವಿವಿಧ ಬಗೆಯ ಗೋದಲಿ ರಚನೆ ಮಾಡಿ ಗಮನ ಸೆಳೆಯುತ್ತಿದ್ದಾರೆ.
45 ದಿನಗಳಿಂದ ಮಡದಿಯ ಸಹಕಾರದೊಂದಿಗೆ ನಿರುಪಯುಕ್ತ ವಸ್ತುಗಳಾದ ಪ್ಲಾಸ್ಟಿಕ್ ಪೈಪ್, ಬಲೆ , ಹಳೆಯ ಬಟ್ಟೆಗಳು, ಥರ್ಮಾಕೋಲ್ ಶೀಟ್, ಕಾರ್ಡ್ ಬೋರ್ಡ್, ರಟ್ಟುಗಳನ್ನು ಬಳಸಿ ಹೆಲಿಕಾಫ್ಟರ್ ನಿರ್ಮಿಸಿದ್ದಾರೆ. ಇದಕ್ಕೆ ವಿದ್ಯುತ್ ಲೈಟ್ ಬಳಸಿ ಇನ್ನಷ್ಟು ಮೆರುಗು ನೀಡಿದ್ದಾರೆ.
ಇದರ ಜತೆಗೆ ಯೇಸು ಕ್ರಿಸ್ತನ ಜನ್ಮ ಸ್ಥಳ ಬೆಥಲ್ಹ್ಯಾಮ್ ನಗರದ ಎರಡು ಅಂತಸ್ತಿನ ಕಟ್ಟಡ ರಚನೆ ಮಾಡಿ ಕೆಲ ಭಾಗದಲ್ಲಿ ಕುದುರೆ ಹಟ್ಟಿ, ಇತರ ಪ್ರಾಣಿಗಳ ರಚನೆ , ಕಾಣಿಸ್ಮಾರಿ ಮೆರವಣಿಗೆಯ ಚಿತ್ರಣವನ್ನು ರಚಿಸಿದ್ದಾರೆ.