ಸಂತ ಸೇವಾಲಾಲರ ಆದರ್ಶ ಅಳವಡಿಸಿಕೊಳ್ಳಲು ಕರೆ

udp-15-sevalal
Published on

ಉಡುಪಿ: ಸಂತ ಸೇವಾಲಾಲ್ ಅವರ ಜೀವನಶೈಲಿ ಮತ್ತು ಆದರ್ಶಗಳನ್ನು ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಂಡು ಜನರಿಗೆ ಉತ್ತಮ ಸೇವೆ ನೀಡುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮದನ್ ಮೋಹನ್ ಹೇಳಿದರು.

ಬುಧವಾರ ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಸಣ್ಣ ಸಣ್ಣ ಸಮುದಾಯಗಳ ಅಭಿವೃದ್ಧಿ ಹಾಗೂ ಏಳಿಗೆಗೆ ಪ್ರಯತ್ನಿಸಿದವರಲ್ಲಿ ಸೇವಾಲಾಲ್ ಕೂಡ ಒಬ್ಬರು. ಅಂತಹ ಸಮುದಾಯಗಳು ಅವರ ಆದರ್ಶಗಳನ್ನು ಅಳವಡಿಸಿಕೊಂಡು ಬೆಳೆಯಬೇಕು ಎಂದರು.

ಸಂತ ಸೇವಾಲಾಲ್ ಬಂಜಾರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಕೆ.ಎಂ ಮಾತನಾಡಿ, ಸೇವಾಲಾಲರನ್ನು ಸದ್ಗುರು ಎಂದು ಕರೆಯುತ್ತೇವೆ. ಸದ್ಗುರು ಅಂದರೆ ಸುಳ್ಳನ್ನ ಹೇಳದೆ ಯಾವಾಗಲೂ ಸತ್ಯವನ್ನೆ ನುಡಿಯುವವರು. ಅವರು ಸಮಾಜದಲ್ಲಿನ ಅಂಧಕಾರ ಹೋಗಲಾಡಿಸಲು ಪ್ರಯತ್ನಿಸಿದರು. ಬುಡಕಟ್ಟಿನ ಜನರಲ್ಲಿ ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ಮೂಡಿಸಿದ ಮಹಾನ್ ದಾರ್ಶನಿಕ ಎಂದರು. ಜಿಪಂ ಉಪಕಾರ್ಯದರ್ಶಿ ಕಿರಣ್ ಫಡ್ನೇಕರ್, ಜಿಲ್ಲಾ ಬಂಜಾರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಬಂಜಾರ ಸಂಘದ ಕಾರ‌್ಯದರ್ಶಿ ಮನೋಹರ್ ಲಮಾಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net