

ಜಗಳೂರು: ಬಂಜಾರ ಸಮುದಾಯದ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಪ್ರಯುಕ್ತ ಪಟ್ಟಣದಲ್ಲಿ ಬುಧವಾರ ವಿಜೃಂಭಣೆಯ ಮೆರವಣಿಗೆ ಜರುಗಿತು.
ಪ್ರವಾಸಿ ಮಂದಿರದಿಂದ ಮಹಾತ್ಮಗಾಂಧಿ ಹಳೆ ಬಸ್ ನಿಲ್ದಾಣ, ಹೊಸ ಬಸ್ ಸ್ಟ್ಯಾಂಡ್, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿವರೆಗೂ ಸೇವಾಲಾಲ್ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು.
ಯುವಕರು, ಮಹಿಳೆಯರು ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದರು. ಡಿಜೆ ಸೌಂಡ್ಸ್, ಡ್ರಮ್ೆಟ್, ಡೊಳ್ಳು ಕುಣಿತದ ತಂಡ ಗಮನ ಸೆಳೆದವು. ಗೌರಿ ಸಸಿಯೊಂದಿಗೆ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಲಂಬಾಣಿ ಸಾಂಪ್ರದಾಯಿಕ ಗೀತೆಗಳಿಗೆ ಧ್ವನಿಗೂಡಿಸಿ ಕುಣಿದು ಕುಪ್ಪಳಿಸಿದರು. ತಾಲೂಕಿನ ನಾನಾ ತಾಂಡಗಳಿಂದ ಆಗಮಿಸಿದ್ದ ಯುವಕರು, ಹಿರಿಯರು, ಮಹಿಳೆಯರು ಶ್ರೀ ಸೇವಾಲಾಲ್ ಮಹಾರಾಜರಿಗೆ ಜೈಕಾರ ಹಾಕಿದರು.
ಕೊಟ್ಟೂರು ದೂಪದಹಳ್ಳಿ ಮಠದ ಶಿವಪ್ರಕಾಶ್ನಾಯ್ಕ ಸ್ವಾಮಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲರ ಜಯಂತಿ ಆಚರಿಸಲಾಗುತ್ತಿದೆ. ಬಂಜಾರ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರ ಹಾಗೂ ಜೀವನ ಮೌಲ್ಯವನ್ನು ಮುಂದಿನ ಪೀಳಿಗೆಗೆ ಕಾಪಾಡಬೇಕು ಎಂದರು.
ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್ ಮಾತನಾಡಿ, ಲಂಬಾಣಿ ಸಮುದಾಯದ ಭವನ ನಿರ್ವಿುಸಲು ಶಾಸಕರು ನಿವೇಶನ ಗುರುತಿಸಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಅನುದಾನದಲ್ಲಿ ಭವನ ನಿರ್ವಿುಸಿಕೊಡಲಿದ್ದಾರೆ ಎಂದರು.
ಜಿ.ಪಂ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಜಿ.ಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿದರು. ಲಂಬಾಣಿ ಸಮುದಾಯ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ನಾಯ್ಕ, ಕಾರ್ಯದರ್ಶಿ ಕುಮಾರ್ನಾಯ್ಕ, ಪ.ಪಂ ಅಧ್ಯಕ್ಷ ನವೀನ್, ಮುಖಂಡರಾದ ಕೃಷ್ಣಮೂರ್ತಿ ನಾಯ್ಕ, ಸತೀಶ್ನಾಯ್ಕ, ರಾಜನಾಯ್ಕ, ಶಶಿನಾಯ್ಕ, ಧರ್ಮನಾಯ್ಕ, ರವಿಕುಮಾರ್, ಮಹಾಂತೇಶ್, ಶಿಕ್ಷಕ ಅಂಜಿನನಾಯ್ಕ ಮತ್ತಿತರರಿದ್ದರು.