ಸೇವಾಲಾಲ್ ಅವರ ವಿಚಾರಧಾರೆ ಅಳವಡಿಸಿಕೊಳ್ಳಲಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯಕುಮಾರ್ ಹೇಳಿಕೆ

sant sevalal maharaj jayanti mandya
Published on

ಮಂಡ್ಯ: ಸಂತ ಸೇವಾಲಾಲ್ ಅವರು ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ನೀತಿಮಾತುಗಳನ್ನು ತಮ್ಮ ವಚನ, ಉಪದೇಶಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಅವರ ಉತ್ತಮ ವಿಚಾರಧಾರೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯಕುಮಾರ್ ತಿಳಿಸಿದರು.

ನಗರದ ಗಾಂಧಿಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನೇಕ ಮಹನೀಯರು, ಸಂತರು ತಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡಿದ್ದಾರೆ. ಸರ್ಕಾರವು ಕನ್ನಡ ಸಂಸ್ಕೃತಿಯ ಇಲಾಖೆ ವತಿಯಿಂದ ಹಲವಾರು ಮಹನೀಯರ ಜಯಂತಿಗಳನ್ನು ಆಚರಿಸುತ್ತಿದೆ ಎಂದರು.

ಸಂತ ಸೇವಾಲಾಲ್ ಭರತ ಖಂಡದ ಧಾರ್ಮಿಕ ರಾಯಭಾರಿಯಾಗಿದ್ದವರು. ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು. ತಮ್ಮ ಉಪದೇಶಗಳ ಮೂಲಕ ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಮುಂದಾದ ಮಹಾನ್ ವ್ಯಕ್ತಿಯಾಗಿದ್ದಾರೆ. ತಮ್ಮ ಭಕ್ತಿ ಮತ್ತು ಧ್ಯಾನದ ಮೂಲಕ ಇಡೀ ಸಮಾಜಕ್ಕೆ ಜೀವನಾದರ್ಶವಾಗಿದ್ದವರು. ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಎಲ್ಲ ಜನರು ಒಟ್ಟಾಗಿ ಸಂತ ಸೇವಾಲಾಲರ ಜಯಂತಿಯನ್ನು ಆಚರಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ರಮೇಶ್‌ನಾಯಕ್ ಮಾತನಾಡಿ, ಸಂತ ಸೇವಾಲಾಲರು ಯೋಗಿ, ಮಹಾಸಂತರಾಗಿ ಲೋಕಕಲ್ಯಾಣಕ್ಕಾಗಿ ಶ್ರಮಿಸಿದವರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವವನ್ನು ಮೂಡಲು ಪ್ರೇರೇಪಿಸಿದವರು. ತಮ್ಮ ತತ್ವ ಹಾಗೂ ಜ್ಞಾನದ ಮೂಲಕ ಲೋಕಕ್ಕೆ ಮುಕ್ತಿ ಮಾರ್ಗವನ್ನು ತೋರಿಸುವ ಮೂಲಕ ಜನರ ಅಜ್ಞಾನವನ್ನು ದೂರಮಾಡಿದವರು. ಅಂದಿನ ಸಮಾಜದ ಜನತೆಗೆ ಶಿಕ್ಷಣವನ್ನೂ ಪಡೆದು, ಧರ್ಮಾತೀತರಾಗಿ ಎಂದು ಕರೆಕೊಟ್ಟವರು. ಅವರ ಉಪದೇಶಗಳನ್ನು ಜನರು ಪ್ರಸ್ತುತ ಜೀವನದಲ್ಲಿ ಅಳವಡಿಸಿಕೊಂಡು ಜೀವನ ನಡೆಸಬೇಕು ಎಂದರು.

ಮುಖಂಡರಾದ ವೆಂಕಟನಾಯಕ್, ಕಿರಣ್‌ಕುಮಾರ್, ಮಂಗಳಮ್ಮ, ಜಯಲಕ್ಷ್ಮೀ ಇತರರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಂತ ಸೇವಾಲಾಲ್ ಅವರ ಭಾವಚಿತ್ರ ಮೆರವಣಿಗೆ ಕಲಾಮಂದಿರದಿಂದ ಹೊರಟು ಗಾಂಧಿಭವನದಲ್ಲಿ ಸಮಾವೇಶಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net