

ವಿಜಯವಾಣಿ ಸುದ್ದಿಜಾಲ ಉಡುಪಿ
ಜಗತ್ತಿನಲ್ಲಿರುವ ಎಲ್ಲ ಭಾಷೆಗಳೂ ರೂಢಿಯಲ್ಲಿರುವ ಶಬ್ದ ಬಳಕೆಯಿಂದ ರಚಿತವಾದುದಾಗಿದೆ. ಆದರೆ, ಎಲ್ಲ ಭಾಷೆಗಳಿಗೂ ತಾಯಿಯಾದ ಸಂಸ್ಕೃತವು ಸಂಸ್ಕಾರಯುಕ್ತ, ಜ್ಞಾನಯುಕ್ತ, ಬದ್ಧ ವ್ಯಾಕರಣ ಹಾಗೂ ಶಾಸ್ತ್ರೀಯವಾದ ಭಾಷೆಯಾಗಿದೆ. ಹೀಗಾಗಿ ಸಂಸ್ಕೃತೋತ್ಸವ ಆಚರಣೆಗೆ ಸೀಮಿತವಾಗದೆ ನಿತ್ಯದ ಜೀವನೋತ್ಸವ ಆಗಲಿ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಉಡುಪಿಯ ಎಸ್ಎಂಎಸ್ಪಿ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಇಂದು ಜಗತ್ತನ್ನು ಆಳುತ್ತಿರುವ ಆಂಗ್ಲ ಭಾಷೆ ಶಾಸ್ತ್ರೀಯವಾದುದಲ್ಲ. ಅಸ್ಪಷ್ಟ ಉಚ್ಛಾರಣೆ ಹಾಗೂ ಇಂದ್ರಿಯಗಳೂ ಅಶುದ್ಧವಾಗುತ್ತದೆ. ಆಂಗ್ಲ ಭಾಷೆಯನ್ನು ಮೂದಲಿಸಲು ಹೀಗೆ ಹೇಳುತ್ತಿಲ್ಲ. ಕಟ್ ಹಾಗೂ ಪುಟ್ ಶಬ್ದವನ್ನೇ ನೋಡಿ ಅದರ ಉಚ್ಛಾರಣೆ ಹೇಗಿದೆ? ವಿನಾಕಾರಣ ಸೈಲೆಂಟ್ ಪದಗಳು ಬರುತ್ತವೆ. ಬರೆದಿದ್ದನ್ನು ಹಾಗೆಯೇ ಓದಲಾಗುವುದಿಲ್ಲ. ಆದರೆ, ಸಂಸ್ಕೃತ ಭಾಷೆಯು ಬರೆದ ರೀತಿಯಲ್ಲೇ ಓದಲು ಸಾಧ್ಯ. ಸ್ಪಷ್ಟ ಉಚ್ಛಾರಣೆಯೊಂದಿಗೆ ಇಂದ್ರಿಯ ಶುದ್ಧವಾಗುತ್ತದೆ. ತುಲನೆ ಮಾಡಿದರೆ ಆಂಗ್ಲ ಭಾಷೆಗಿಂತ ದೇವರು ರಚಿತ ಸಂಸ್ಕೃತವೇ ಶ್ರೇಷ್ಠ ಎಂದರು.
ಸಂಸ್ಕೃತೋತ್ಸವದ ನಿಮಿತ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ಶ್ರೀ ಆಶೀರ್ವಚನ ನೀಡಿದರು.
ಮೂಡಬಿದ್ರೆ ಆಳ್ವಾ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಅಧ್ಯಕ್ಷ ಡಾ. ವಿನಾಯಕ ಭಟ್ಟ ಗಾಳಿಮನೆ, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ, ಸಂಸ್ಕೃತ ಶಾಲೆಯ ಕಾರ್ಯದರ್ಶಿ ಗೋಪಾಲಕೃಷ್ಣ ಜೋಯಿಸ್, ಕೋಶಾಧಿಕಾರಿ ಚಂದ್ರಶೇಖರ್ ಆಚಾರ್ಯ ಉಪಸ್ಥಿತರಿದ್ದರು.
ಶಾಲೆಯ ವಿದ್ಯಾರ್ಥಿಗಳಾದ ಪ್ರಹ್ಲಾದ್ ರಾವ್, ಶಿವಕೃಷ್ಣ, ಶ್ರೀಕೃಷ್ಣ ವೇದಘೋಷ ನಡೆಸಿದರು. ಆನಂದ ತೀರ್ಥ ವಿದ್ಯಾಲಯದ ವಿದ್ಯಾರ್ಥಿನಿ ಶ್ರೇಯಾ ಯು. ನಾಯಕ್ ಪ್ರಾರ್ಥಿಸಿದರು. ಸಂಸ್ಥೆಯ ಪ್ರಾಂಶುಪಾಲ ಸತ್ಯನಾರಾಯಣ ವೆಂಕಟ ರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜೋತಿಷ ವಿಭಾಗದ ಮುಖ್ಯಸ್ಥ ಡಾ. ಶಿವಪ್ರಸಾದ್ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ವೇದಾಂತ ಪ್ರಾಧ್ಯಾಪಕ ಡಾ. ಷಣ್ಮುಖ ಹೆಬ್ಬಾರ್ ವಂದಿಸಿದರು.
ಸಂಸ್ಕೃತವು ಭಾರತದ ಸಂಸ್ಕೃತಿ ಪ್ರತೀಕ. ಜಗತ್ತಿನ ಭಾಷೆಯಾಗಿರುವ ಇಂಗ್ಲಿಷ್ ಇಂದು ಕುರೂಪವಾಗುತ್ತಿದೆ. ವಾಟ್ಸಾಪ್ಗಳಲ್ಲಿ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೆಜ್ಅನ್ನು ಜಿಎಂ, ಜಿಎನ್ ಎಂದಷ್ಟೇ ಕಳುಹಿಸುತ್ತಿದ್ದಾರೆ. ಭಾರತದ ಮೇಲೆ, ಇಲ್ಲಿನ ಸಂಸ್ಕೃತಿಯ ಮೇಲೆ, ಸನಾತನ ಧರ್ಮದ ಮೇಲೆ ಅದೆಷ್ಟೋ ದಾಳಿ ಈ ಹಿಂದೆ ಆಗಿದೆ, ಈಗಲೂ ಆಗುತ್ತಿದೆ. ಆದರೆ, ಯಾವ ದಾಳಿಗೂ ಭಾರತೀಯತೆ, ಸಂಸ್ಕೃತಿ ನಶಿಸಿಲ್ಲ. ಅದು ಪ್ರತಿದಿನವೂ ಚಿಗುರೊಡೆದು ಹೆಮ್ಮರವಾಗುತ್ತಲೇ ಇದೆ. | ಡಾ. ವಿನಾಯಕ ಭಟ್ ಗಾಳಿಮನೆ. ಸಂಸ್ಕೃತ ವಿದ್ವಾನ್