

ಉಡುಪಿ: ಪ್ರಾಚೀನರ ಅಧ್ಯಯನ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಅಪಾರ, ಅಗಾಧವಾದುದು. ಈ ಜ್ಞಾನಭಂಡಾರದ ಕೀಲಿಕೈ ಸಂಸ್ಕೃತ ಭಾಷೆಯಾಗಿದೆ ಎಂದು ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಸೋಮವಾರ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಮಂಗಳೂರು ವಿ.ವಿ. ಸಂಸತ ಪಾಠ್ಯವಿಷಯಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದೈನಂದಿನ ವ್ಯವಹಾರಗಳು ಬದಲಾದಂತೆ ಭಾಷೆೆಯೂ ಬದಲಾಗುತ್ತದೆ. ಆದರೆ ಸಂಸ್ಕೃತವು ತನ್ನ ವಿಶಿಷ್ಟ್ಟ ಭಾಷಾರಚನೆಯ ಕಾರಣದಿಂದ ಅವಿಚ್ಛಿನ್ನವಾಗಿ ಬದಲಾಗದೆ ಉಳಿದಿದೆ. ಸನಾತನ ಭಾರತೀಯ ಜೀವನ ಮೌಲ್ಯವನ್ನು ಅರಿಯಲು ಸಂಸ್ಕೃತ ಸಹಾಯಕವಾಗಿದೆ. ಭಾರತದ ಪ್ರಜೆಗಳಾಗಿರುವ ನಮಗೆ ಸಂಸ್ಕೃತದ ಅರಿವಿರಬೇಕಾದುದು ಅತ್ಯವಶ್ಯ ಎಂದು ನುಡಿದರು.
ಮುಖ್ಯ ಅಭ್ಯಾಗತರಾದ ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಡಾ. ಜಿ. ಎಸ್ ಚಂದ್ರಶೇಖರ್ ಅವರು 'ಕಾಲಕ್ಕೆ ತಕ್ಕಂತೆ ಪಾಠ್ಯವಿಫಿಯಗಳು ಬದಲಾಗಲಿ. ಅವು ಮಕ್ಕಳ ಕೌಶಲಾಭಿವೃದ್ಧಿಗೆ ಸಹಾಯಕವಾಗುವಂತಿರಲಿ, ಸಂಸ್ಕೃತದ ವಾತಾವರಣ ನಿಮಾರ್ಣವಾಗಲಿ' ಎಂದು ಆಶಿಸಿದರು.
ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಸಿಎ ಪ್ರಶಾಂತ್ ಹೊಳ್ಳ, 'ಆಧುನಿಕ ತಂತ್ರಜ್ಞಾನದಲ್ಲಿ ಸಂಸ್ಕೃತದ ಬಳಕೆ ಹೆಚ್ಚಾಗಲಿ' ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪೂರ್ಣಪ್ರಜ್ಞ ಕಾಲೇಜಿನ ಪ್ರಾಚಾರ್ಯ ಡಾ. ರಾಮು ಎಲ್., ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಂಸತವನ್ನು ಜನಮಾನಸದೆಡೆಗೆ ಒಯ್ಯುವ ಹೊಣೆಗಾರಿಕೆಯನ್ನು ಸಂಸ್ಕೃತ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹೊರಬೇಕು ಎಂದು ಹೇಳಿದರು.
ಮಂಗಳೂರು ವಿ.ವಿ. ಸಂಸ್ಕೃತ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ರಮೇಶ್ ಟಿ. ಎಸ್. ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತರಾದ ಡಾ. ಮಧುಸೂದನ ಭಟ್ ಹಾಗೂ ವಿದ್ವಾನ್ ವಾಗೀಶ ಶಾಸ್ತ್ರಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ವಿದ್ಯಾರ್ಥಿನಿ ಹರ್ಷಿತಾ ಹಾಗೂ ವೈಷ್ಣವಿ ಪ್ರಾರ್ಥನೆ ನೆರವೇರಿಸಿದರು. ಸಂಸ್ಕೃತ ಉಪನ್ಯಾಸಕ ಡಾ.ಆನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವಿ.ವಿ. ಸಂಸತ ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ. ಮಂಜುನಾಥ ಭಟ್ ವಂದಿಸಿದರು.