

ಹುಬ್ಬಳ್ಳಿ: ವಿಶ್ವ ಸಂಸ್ಕೃತ ದಿನ ನಿಮಿತ್ತ ಮಜೇಥಿಯಾ ಫೌಂಡೇಷನ್ ಹಾಗೂ ಸಂಸ್ಕೃತ ಭಾರತಿ ಸಹಭಾಗಿತ್ವದಲ್ಲಿ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆ. 31ರಂದು ಬೆಳಗ್ಗೆ 11ರಿಂದ ರಾತ್ರಿ 8ರವರೆಗೆ ಸಂಸ್ಕೃತಾಮೃತಮ್ ಅಭಿಯಾನದ ಸಮಾರೋಪ ಹಾಗೂ ಜ್ಞಾನದಾ ಸಂಸ್ಕೃತಿ ಪ್ರದರ್ಶಿನಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಕೃತಾಮೃತಮ್ ಅಭಿಯಾನದ ಸದಸ್ಯ ಸುಭಾಷಸಿಂಗ್ ಜಮಾದಾರ,
ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ.ಸಿ. ಬಸವರಾಜು ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಸ್ಕೃತ ಭಾರತಿ ಮಹಾಮಂತ್ರಿ ಸತ್ಯನಾರಾಯಣ, ಮಜೇಥಿಯಾ ಫೌಂಡೇಷನ್ ಅಧ್ಯಕ್ಷೆ ನಂದಿನಿ ಮಜೇಥಿಯಾ, ಉದ್ಯಮಿ ಕಶ್ಯಪ ಮಜೇಥಿಯಾ ಉಪಸ್ಥಿತರಿರುವರು ಎಂದರು.
ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ನಿರ್ಭಯಾನಂದ ಮಹಾರಾಜ ಸಾನ್ನಿಧ್ಯ ವಹಿಸುವರು. ಧಾರವಾಡ ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಪಾಲ್ಗೊಳ್ಳುವರು. ವಕ್ತಾರರಾಗಿ ಅಖಿಲ ಭಾರತೀಯ ಸಂಘಟನ ಮಂತ್ರಿ ದಿನೇಶ ಕಾಮತ ಭಾಗವಹಿಸುವರು. ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಅಧ್ಯಕ್ಷತೆ ವಹಿಸುವರು ಎಂದರು.
ಕಾರ್ಯದರ್ಶಿ ಮುಕುಂದ ಜಠಾರ, ಫೌಂಡೇಷನ್ ಸಿಇಒ ಅಜಿತ್ ಕುಲಕರ್ಣಿ, ಪ್ರಮುಖರಾದ ಅಶೋಕ ಹರಪನಹಳ್ಳಿ, ಲಕ್ಷ್ಮೀನಾರಾಯಣ, ಸುನೀಲ ಕುಕನೂರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.