

ಬೆಳಗಾವಿ: ಸಂಸ್ಕೃತ ಭಾಷೆಯು ವಿಶ್ವಭಾಷೆಗಳ ತಾಯಿ ಎನಿಸಿಕೊಂಡಿದೆ. ಲ್ಯಾಟಿನ್, ಇಂಗ್ಲಿಷ್ ಮೊದಲಗೊಂಡು ಜಗತ್ತಿನ ಎಲ್ಲ ಭಾಷೆಗಳ ಮೇಲೆ ಸಂಸ್ಕೃತ ತನ್ನ ಅಚ್ಚಳಿಯದ ಪ್ರಭಾವ ಬೀರಿದೆ ಎಂದು ಹಳಿಂಗಳಿ ಕಮರಿಮಠ ಶಿವಾನಂದ ದೇವರು ಹೇಳಿದರು.
ಶಿವಬಸವನಗರದ ಸಿದ್ಧಲಿಂಗೇಶ್ವರ ಸಂಸ್ಕೃತ ಪಾಠಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಸಂಸ್ಕೃತೋತ್ಸವ ಮತ್ತು ರಕ್ಷಾಬಂಧನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಾತೃ-ಮದರ್, ಪಿತೃ-ಾದರ್, ಭಾರ್ತೃ-ಬರ್ದರ್ ಹೀಗೆ ಎಲ್ಲ ಭಾಷೆಗಳ ಮೂಲ ಬೇರು ಸಂಸ್ಕೃತದಲ್ಲಿದೆ. ಸಂಸ್ಕೃತದಲ್ಲಿರುವಷ್ಟು ಸೊಗಸು ಉಳಿದ ಭಾಷೆಗಳಲ್ಲಿ ಇಲ್ಲ ಎಂದು ಅಭಿಪ್ರಾಯಪಟ್ಟರು. ನೇತೃತ್ವ ವಹಿಸಿದ್ದ ಕತ್ರದಡ್ಡಿ ಯೋಗಾಶ್ರಮದ ಓಂ ಗುರೂಜಿ ಸುಕುಮಾರ, ಸಹೋದರರ ಪ್ರೀತಿ ವಾತ್ಸಲ್ಯಕ್ಕೆ ರಕ್ಷಾಬಂಧನ ಒಂದು ಉಜ್ವಲ ನಿದರ್ಶನವಾಗಿದೆ ಎಂದು ರಕ್ಷಾಬಂಧನದ ಮಹತ್ವ ವಿವರಿಸಿದರು.
ಸಂಸ್ಕೃತ ಶಿಕ್ಷಕ ವೀರಭದ್ರಯ್ಯ ಶಾಸಿಗಳು ಹಿರೇಮಠ ಪ್ರಾಸ್ತಾವಿಕ ಮಾತನಾಡಿ, ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ನಂತರ ಸಂಸ್ಕೃತ ಭಾಷೆಯ ಅಧ್ಯಯನ-ಅಧ್ಯಾಪನ-ಸಂಶೋಧನಾ ಯೋಜನೆಗಳು ಕ್ರಿಯಾಶೀಲವಾಗಿ ಮುನ್ನಡೆಯುತ್ತಿವೆ. ಸಂಸ್ಕೃತ ಭಾಷೆಯ ಬಗೆಗೆ ವಿದ್ಯಾರ್ಥಿಗಳಲ್ಲಿ ಒಲವು ಮೂಡುತ್ತಿದೆ. ದೇವ ಭಾಷೆ ಎಂದು ಖ್ಯಾತವಾದ ಸಂಸ್ಕೃತ ಭಾಷೆಯು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಕಲಿಸುತ್ತದೆ, ತನ್ಮೂಲಕ ಸರ್ವಾಂಗ ಸುಂದರ ಸ್ವಾಸ್ಥ್ಯ ಸಮಾಜಕ್ಕೆ ದಾರಿ ಮಾಡಿಕೊಡುತ್ತದೆ ಎಂದರು. ಜಿ.ಜಿ.ಯಳ್ಳೂರ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಗೀತಾ ಮರಡಿಮಠ ಅಧ್ಯಕ್ಷತೆ ವಹಿಸಿದ್ದರು. ಡಿ.ಡಿ.ಜಾಧವ ನಿರೂಪಿಸಿದರು. ಲಕ್ಷ್ಮಣ ರೋಣಿ ವಂದಿಸಿದರು.