ಸಮಾಜದ ಅಭಿವೃದ್ಧಿಗೆ ಸಂಸ್ಕೃತ ಪೂರಕ

7mlk12
Published on

ಮೇಲುಕೋಟೆ: ಸಂಸ್ಕೃತ ಸಾಹಿತ್ಯದ ಸಾರಭೂತ ಅಂಶಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌ನಲ್ಲಿ ನವದೆಹಲಿಯ ಕೇಂದ್ರಿಯ ಸಂಸ್ಕೃತ ವಿಶ್ವ ವಿದ್ಯಾಲಯ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಉಪವೇದಗಳ ಉಪಯೋಗ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿ ಸಮಾರೋಪ ಸಮಾರಂಭದಲ್ಲಿ ಬುಧವಾರ ಅವರು ಮಾತನಾಡಿದರು.
ಸಂಸ್ಕೃತ ಭಾಷೆಯಲ್ಲಿ ನಮ್ಮ ನೆಲದ ಶ್ರೀಮಂತ ಸಾಹಿತ್ಯವಿದೆ. ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಪ್ರತಿಯೊಂದು ವಿಚಾರವೂ ಇಲ್ಲಿ ಅಡಗಿದೆ. ನಾನು ಪ್ರೌಢಶಾಲಾ ಹಂತದಲ್ಲಿ ಕಲಿತ ಸಂಸ್ಕೃತ ಭಾಷೆ ವಿದೇಶದಲ್ಲಿ ಕಂಪನಿ ಕಟ್ಟಲು ಮತ್ತು ಉತ್ತಮವಾಗಿ ನಿರ್ವಹಿಸಲು ಪ್ರೇರಣೆ ನೀಡಿತು ಎಂದರು.
ಜ್ಞಾನ, ವಿಜ್ಞಾನ, ಜೀವನ ಕೌಶಲ ಸೇರಿದಂತೆ ಬದುಕಿಗೆ ಬೇಕಾದ ಸಮೃದ್ಧ ವಿಚಾರಗಳು ಸಂಸ್ಕೃತ ಭಾಷೆಯಲ್ಲಿವೆ. ಸಂಸ್ಕೃತ ಅಧ್ಯಯನದಿಂದ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಸಂಸ್ಕೃತ ಭಾಷೆ ಉತ್ತೇಜನಕ್ಕೆ ಕೆಲಸ ಮಾಡುವ ಮೇಲುಕೋಟೆಯ ಭಗವದ್ ರಾಮಾನುಜ ಸಂಶೋಧನಾ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡುವೆ. ಆಚಾರ್ಯ ರಾಮಾನುಜರು ನಡೆದಾಡಿದ ಪವಿತ್ರ ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿರುವೆ ಎಂದು ಭರವಸೆಯಿತ್ತರು.
ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ಕುಲಸಚಿವ ವಿದ್ವಾನ್ ಕುಮಾರ್ ಮಾತನಾಡಿ, ಸಂಸ್ಥೆ ಪುರಾತನ ತಾಳೆಗರಿಗಳ ಸಂಗ್ರಹ ಮಾಡಿದೆ. ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದೆ. ಇದೀಗ ವಿವಿಧ ವಿಚಾರಗೋಷ್ಠಿಗಳನ್ನು ಸಂಘಟಿಸಿ ಭಾರತೀಯ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತ ವಿವಿ ಕುಲಸಚಿವೆ ಡಾ. ಅಹಲ್ಯಾ ಶರ್ಮ ಮಾತನಾಡಿ, ಕರ್ನಾಟಕ ಸಂಸ್ಕೃತ ವಿವಿ ಆಯುರ್ವೇದ, ಯೋಗ, ಸಂಸ್ಕೃತ ಭಾಷೆಯ ಹಲವು ಪಠ್ಯಗಳನ್ನು ಮುದ್ರಿಸಿದೆ. ಈ ವಿಷಯಗಳ ಬೋಧನೆಯನ್ನೂ ಯಶಸ್ವಿಯಾಗಿ ಮಾಡುತ್ತಿದೆ ಎಂದರು.
ದೇವಾಲಯ ಅರ್ಚಕ ಆಗಮಿಕರ ಸಂಘದ ಗೌರವಾಧ್ಯಕ್ಷ ಡಾ.ಜಾನಕಿ ರಾಂ, ಪಾಠಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಬಿ. ಗಂಗಾಧರಯ್ಯ, ವಿದ್ವಾನ್ ನಾರಾಯಣ, ಪ್ರೊ.ಪಾಲಯ್ಯ ಇದ್ದರು.
ಸನ್ಮಾನ: ಸಂಸ್ಕೃತ ಭಾಷಾ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಹಿರಿಯ ವಿದ್ವಾಂಸರಾದ ಶಿರಸಿಯ ಸ್ವರ್ಣವಲ್ಲಿ ಆರ್.ಆರ್.ಎಸ್. ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಶಂಕರ ನಾರಾಯಣಭಟ್ಟ, ಉಡುಪಿಯ ಹರಿದಾಸಭಟ್ಟ, ತುಮಕೂರು ಸಿದ್ಧಗಂಗಾ ಮಠದ ಸಂಸ್ಕೃತ ಕಾಲೇಜು ನಿವೃತ್ತ ಪ್ರಾಧ್ಯಾಪಕ ವಿದ್ವಾನ್ ಡಿ.ಎಂ. ಮಲ್ಲಿಕಾರ್ಜುನಯ್ಯ ಅವರನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸನ್ಮಾನಿಸಿದರು.

ಲಯ್ಯ, ಡಾ.ಜಾನಕಿರಾಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net