

ಮೈಸೂರು: ಸಂಸ್ಕೃತ ಭಾಷೆ ಯಾರ ಸ್ವತ್ತು ಅಲ್ಲ, ಎಲ್ಲರು ಈ ಭಾಷೆಯನ್ನು ಕಲಿಯಬಹುದು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠ ವತಿಯಿಂದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಸ್ಕೃತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಕೃತ ಕಲಿಕೆ ಈ ಹಿಂದೆ ಮೇಲ್ವರ್ಗಕ್ಕೆ ಸೀಮಿತ ಎಂಬ ಭಾವನೆ ಇತ್ತು. ಆದರೆ, ವಾಲ್ಮೀಕಿ ಬ್ರಾಹ್ಮಣ ಅಲ್ಲ. ಆದರೆ, ಅವರು ಸಂಸ್ಕೃತದಲ್ಲಿ ರಾಮಾಯಣ ರಚಿಸಿದರು. ಅನಾದಿ ಕಾಲದಿಂದಲೂ ಸಂಸ್ಕೃತ ಎಲ್ಲರ ಭಾಷೆಯಾಗಿತ್ತು ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದರು.
ಸಂಸ್ಕೃತ ಕಲಿತರೆ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತ ಎಂಬ ಭಾವನೆ ಕೆಲವರಲ್ಲ ಇದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಜನರು ಸಂಸ್ಕೃತ ಕಲಿಯಲು ಆಸಕ್ತಿ ತೋರುತ್ತಿದ್ದು, ಸಂಸ್ಕೃತದ ಕೆಲಸ ಅಗಾಧವಾಗಿ ನಡೆಯುತ್ತಿದೆ. ವಿವಿಧ ಸಮುದಾಯದ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಉತ್ತಮ ಸಾಧನೆಯನ್ನು ತೋರುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಸಂಸ್ಕೃತ ವಿದ್ವಾಂಸ ಡಾ.ಎಚ್.ವಿ. ನಾಗರಾಜ ರಾವ್, ಜ್ಯೋತಿಷ್ಯ ವಿದ್ವಾಂಸ ಡಾ.ಕೆ.ಜಿ. ಪುಟ್ಟಹೊನ್ನಯ್ಯ, ಆಗಮ ವಿದ್ವಾಂಸ ಪ್ರೊ.ಎಂ. ಮಲ್ಲಣ್ಣ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿ. ಗಿರೀಶ್‌ಚಂದ್ರ ಇದ್ದರು.