

ಯಾವುದು ಏನು ಅರ್ಥ ನೀಡುತ್ತದೆಯೋ ಅದೇ ಶಬ್ದವನ್ನು ಪ್ರಯೋಗ ಮಾಡಬೇಕು ಎಂದು ಉಡುಪಿ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮೈಸೂರು ವಿಶ್ವವಿದ್ಯಾಲಯ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಶಬ್ದಶಾಸ್ತ್ರ’ ವಿಷಯ ಕುರಿತು ಉಪನ್ಯಾಸ ನೀಡಿದರು. ಅನೇಕ ಶಬ್ದಗಳ ಉದಾರಣೆ ನೀಡಿದ ಅವರು, ಎರಡು ರೂಪಗಳು ಸಿದ್ಧವಾಗಿದ್ದಾಗ ಸಹಜವಾದ ರೂಪವನ್ನು ಸ್ವೀಕರಿಸಬೇಕು ಎಂದರು.
ನಮ್ಮ ಅಭಿಪ್ರಾಯವನ್ನು ಪರರಿಗೆ ಮುಟ್ಟಿಸಲು ಬಳಸುವುದೇ ಶಬ್ದ. ಏನು ಹೇಳಲು ಹೊರಟ್ಟಿದ್ದೇವೆ ಎನ್ನುವುದನ್ನು ತಿಳಿಸುವ ಮಾಧ್ಯಮವೇ ಶಬ್ದ. ಯಾವುದೇ ಶಬ್ದ ಪರಿಪೂರ್ಣ ಅರ್ಥ ಹೇಳುವಂತಿರಬೇಕು. ಎರಡು ಕಡೆ ದೋಷ ಇದ್ದರೆ ಕಡಿಮೆ ದೋಷ ಇರುವುದನ್ನು ಸ್ವೀಕರಿಸಬೇಕು ಎಂದು ಹೇಳಿದರು.
ನಮ್ಮಲ್ಲಿ ಏನು ಬರೆಯುತ್ತೇವೋ ಹಾಗೇ ಓದುತ್ತೇವೆ. ಏನು ಓದುತ್ತೇವೋ ಹಾಗೇ ಬರೆಯುತ್ತೇವೆ. ಆದರೆ ಇಂಗ್ಲಿಷ್‌ನಲ್ಲಿ ಹಾಗಲ್ಲ. ಬರೆಯುವುದೊಂದು, ಓದುವ ಕ್ರಮ ಇನ್ನೊಂದು. ಹೀಗೇಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ ಎಂದರು. ಇದೇ ವೇಳೆ ದೋಷ ಇರುವ ಅನೇಕ ಪದಗಳನ್ನು ಉದಾರಣೆ ಸಮೇತ ವಿವರಿಸಿದರು.
ಸಂಸ್ಕೃತ ಎಲ್ಲ ಭಾಷೆಗಳಿಗೂ ಮಾತೃಭಾಷೆ ಎನ್ನುವುದನ್ನು ನಾವು ತಿಳಿದಿದ್ದೇವೆ. ಕನ್ನಡ ಭಾಷೆಯಲ್ಲಿ ಸಂಖ್ಯೆಯನ್ನು ಪರಿಗಣಿಸುವಾಗ ಮೊದಲಿಗೆ ‘ಒಂದು’ ಅನ್ನು ಪರಿಗಣಿಸುತ್ತೇವೆ. ತಮಿಳಿನಲ್ಲಿ ಒನ್ನು, ತುಳುವಿನಲ್ಲಿ ಒಂಜಿ, ಇಂಗ್ಲಿಷ್‌ನಲ್ಲಿ ಒನ್ ಎನ್ನುತ್ತೇವೆ. ಎಲ್ಲ ಕಡೆಯೂ ಬಹುತೇಕ ಒಂದೇ ರೀತಿ ಉಚ್ಚಾರಣೆ ಗಮನಿಸಬಹುದು. ಇದರ ಮೂಲ ಇಂಗ್ಲಿಷ್ ಇರಬಹುದೇ ಎನ್ನಲು ಸಾಧ್ಯವಾಗುವುದಿಲ್ಲ. ಇಂಗ್ಲಿಷ್ ಇತ್ತೀಚೆಗೆ ಹುಟ್ಟಿರುವ ಭಾಷೆ. ಕನ್ನಡ, ತುಳು, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ ಎಂದರು.
ಸಂಶೋಧನಾಲಯ ನಿರ್ದೇಶಕ ಡಾ.ಡಿ.ಪಿ.ಮಧುಸೂದನಾಚಾರ್ಯ ಇದ್ದರು.