

ಸಿದ್ದಾಪುರ: ಕಾಮದೇನುವಿನಂಥ ಸಂಸ್ಕೃತವನ್ನು ಪೂಜಿಸಿ ಗೌರವಿಸಬೇಕು. ಸಂಸ್ಕೃತ ಅಮೃತ ಭಾಷೆ. ಸನಾತನ ಭಾಷೆಯಾದ ಸಂಸ್ಕೃತವನ್ನು ಎಲ್ಲರೂ ಓದೋಣ ಮತ್ತು ವಿದ್ಯಾರ್ಥಿಗಳು ನಿಶ್ಚಯವಾಗಿ ಸಂಸ್ಕೃತವನ್ನು ಓದಿ ಭಾರತವನ್ನು ಉತ್ತುಂಗಕ್ಕೆ ಒಯ್ಯಬೇಕಾಗಿದೆ ಎಂದು ಮೈಸೂರು ಮಹಾರಾಜ ಸಂಸ್ಕೃತ ಮಹಾಪಾಠಶಾಲೆಯ ನಿವೃತ್ತ ಪ್ರಾಧ್ಯಾಪಕ ವಿ.ಗಂಗಾಧರ ಭಟ್ಟ ಅಗ್ಗೇರೆ ಹೇಳಿದರು.
ರಾಜ್ಯ ಪ್ರೌಢಶಾಲಾ ಸಂಸ್ಕೃತಾಧ್ಯಾಪಕ ಸಂಘ, ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಸಂಸ್ಕೃತಾಧ್ಯಾಪಕ ಸಂಘದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ/ತೃತೀಯ ಭಾಷೆ ಸಂಸ್ಕೃತದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪಟ್ಟಣದ ಶಂಕರಮಠದಲ್ಲಿ ಭಾನುವಾರ ಆಯೋಜಿಸಿದ್ದ ಸಂಸ್ಕೃತ ಪ್ರತಿಭಾ ಪುರಸ್ಕಾರ-2023 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಇಒ ಜಿ.ಐ. ನಾಯ್ಕ, ಸಂಸ್ಕೃತವು ಸಕಲ ಭಾಷೆಗಳ ತಾಯಿಯಾಗಿದ್ದು, ಶಾಸ್ತ್ರೀಯ ಹಾಗೂ ಶ್ರೀಮಂತ ಭಾಷೆ ಎಂದು ಹೇಳಿದರು.
ಬೆಂಗಳೂರಿನ ಆಯುಕ್ತರ ಕಚೇರಿಯ ಸಂಸ್ಕೃತ ವಿಷಯ ಪರಿವೀಕ್ಷಕ ಡಾ.ವೆಂಕಟ್ರಮಣ ಭಟ್ಟ ಮಾತನಾಡಿ, 15 ವರ್ಷಗಳಿಂದ ನಿರಂತರವಾಗಿ ಕಾರ್ಯಕ್ರಮ ನಡೆಸುತ್ತ ಬರುತ್ತಿದ್ದು, ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪಾಲಕರು-ಶಿಕ್ಷಕರಿಗೆ ನೀಡುವ ಸನ್ಮಾನ ಆಗಿದೆ ಎಂದರು.
ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸಿದ್ದರು. 160 ವಿದ್ಯಾರ್ಥಿಗಳಿಗೆ ಸಂಸ್ಕೃತ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಗಿರೀಶ ಹೆಗಡೆ ಸ್ವಾಗತಿಸಿದರು. ಟಿ.ಎನ್. ಭಟ್ಟ ನಿರ್ವಹಿಸಿದರು. ರಾಜಾರಾಮ ದೀಕ್ಷಿತ ವಂದಿಸಿದರು.