

ಕುಮಟಾ: ಸಂಸ್ಕೃತವು ಪ್ರಾಚೀನ ಭಾಷೆಯಾಗಿದ್ದು, ಎಲ್ಲ ಭಾಷೆಗಳಿಗೆ ತಾಯಿ ಇದ್ದಂತೆ. ಸಂಸ್ಕೃತ ಭಾಷೆ ಜ್ಞಾನಗಳ ಆಗರ ಎಂದು ವಿದ್ಯಾನಿಕೇತನ ಸಂಸ್ಥೆಯ ಕಾರ್ಯಾಧ್ಯಕ್ಷ ಆರ್.ಜಿ. ಭಟ್ಟ ಹೇಳಿದರು.
ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಹಾಗೂ ಶ್ರೀಧರ ಸಂಸ್ಕೃತ ಪಾಠಶಾಲೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂಸ್ಕೃತೋತ್ಸವದ ವಿದ್ವತ್ ಸಂಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಕೃತವು ಹಿಂದು ಧರ್ಮದ ಆಧ್ಯಾತ್ಮಿಕ ಮತ್ತು ತಾತ್ವಿಕ ಅಡಿಪಾಯ ಹೊಂದಿದೆ. ಆದ್ದರಿಂದ ಅದನ್ನು ಸಾರ್ವತ್ರಿಕ ಭಾಷೆ ಎಂದು ಪರಿಗಣಿಸಲಾಗುತ್ತಿದೆ. ಪ್ರಪಂಚದಾದ್ಯಂತ ಅನೇಕ ಭಾಷೆಗಳ ಮೇಲೆ ಪ್ರಭಾವ ಬೀರಿದೆ. ವೇದಗಳು ಸಂಸ್ಕೃತದಲ್ಲಿ ರಚಿತವಾಗಿದ್ದು ವೇದಾಧ್ಯಯನ ಹಾಗೂ ಸಂಸ್ಕೃತ ಭಾಷೆಯ ಅಧ್ಯಯನದಿಂದ ಎಲ್ಲರೂ ಉನ್ನತ ಸಂಸ್ಕಾರವಂತರಾಗಬೇಕು ಎಂದರು.
ಕಲ್ಲಬ್ಬೆಯ ಜ್ಯೋತಿಷ ವಿದ್ವಾನ್ ರಾಮಕೃಷ್ಣ ಭಟ್ಟ ಹಾಗೂ ನೇತೃತಜ್ಞ ಡಾ. ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ವಿದ್ವಾನ್ ರಾಮಕೃಷ್ಣ ಭಟ್ಟ ಮಾತನಾಡಿ, ಸಾತ್ವಿಕರಿಗೆ, ಸ್ಥಿರತೆ ಉಳ್ಳವರಿಗೆ ಸಂಸ್ಕೃತ ಭಾಷೆ ಒಲಿಯುತ್ತದೆ. ಸಾತ್ವಿಕರು ಎಂತಹ ಕಷ್ಟಕಾಲದಲ್ಲೂ ವಿಕಾರ ಮನಸ್ಸನ್ನು ಹೊಂದದೆ ಸ್ಥಿರತೆಯನ್ನು ಕಾಯ್ದುಕೊಂಡು ಸತ್ಯವನ್ನು ಹೇಳಲು ಸಾಧ್ಯವಿದೆ. ಆದ್ದರಿಂದ ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡಬೇಕು ಎಂದರು.
ವಿದ್ಯಾನಿಕೇತನ ಸಂಸ್ಥೆಯ ಉಪಾಧ್ಯಕ್ಷ ವಿ.ಎಸ್.ಹೆಗಡೆ, ಸದಸ್ಯ ಡಾ.ಎಸ್.ವಿ.ಭಟ್ಟ, ಕಾರ್ಯದರ್ಶಿ ಟಿ.ಎಸ್.ಭಟ್ಟ, ಪ್ರಾಚಾರ್ಯ ಜಿ.ಎಂ.ಭಟ್ಟ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಾರ್ಯಕ್ರಮ ನಿರ್ವಹಿಸಿದರು.