

ಸಂಸ್ಕೃತ ಒಂದೇ ವರ್ಗಕ್ಕೆ ಸೀಮಿತವಾಗಿರುವ ಭಾಷೆ ಅಲ್ಲ. ಇದು ಎಲ್ಲ ವರ್ಗದವರಿಗೂ ಅನ್ವಯಿಸುವ ಭಾಷೆ ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅಭಿಪ್ರಾಯಪಟ್ಟರು.
ಸಂಸ್ಕೃತ ಭಾರತಿ ಕರ್ನಾಟಕ ದಕ್ಷಿಣ, ಸಂಸ್ಕೃತ ಕಾವೇರಿ ವತಿಯಿಂದ ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಿರುವ ಪ್ರಾಂತ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತ ಭಾಷೆಯನ್ನು ಕೆಲವರು ಒಂದೇ ವರ್ಗಕ್ಕೆ ಸೀಮಿತ ಮಾಡಿದ್ದಾರೆ. ಆದರೆ ಕವಿರತ್ನ ಕಾಳಿದಾಸ, ವ್ಯಾಸ, ವಾಲ್ಮೀಕಿ ಅವರು ಮೇಲ್ವರ್ಗಕ್ಕೆ ಸೇರಿದವರಲ್ಲ. ಆದರೂ ರಾಮಾಯಣ, ಮಹಾಭಾರತ ಕಾವ್ಯಗಳನ್ನು ಸಂಸ್ಕೃತದಲ್ಲಿ ರಚಿಸಿ, ಸಂಸ್ಕೃತವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ ಎಂದರು.
ಮನುಷ್ಯನ ಹುಟ್ಟಿನ ಮೂಲವನ್ನು ನೋಡದೆ ಸಾಧನೆಯ ಮೂಲವನ್ನು ನೋಡಬೇಕು. ಜೀವನ ಮೌಲ್ಯ ಮತ್ತು ಬದುಕಿನ ನೈಜ ದರ್ಶನವಾದ ಮೇಲೆ ಸಾಧನೆಗೆ ಬೇಕಾದ ಸೇವೆ. ಸಂಕಲ್ಪ, ಶ್ರದ್ಧೆ, ತ್ಯಾಗ, ಪರಿಶ್ರಮ, ಹೋರಾಟದ ಬದುಕಿನಿಂದ ಸಮಾಜಕ್ಕೆ ಆದರ್ಶವಾಗಬೇಕು ಎಂದು ಹೇಳಿದರು.
ಸಂಸ್ಕೃತದ ಕಾರ್ಯವನ್ನು ಮಾಡುವವರು ಸಂಸ್ಕೃತ ಭಾರತಿಯ ಮೂಲವಾದ ಕರ್ನಾಟಕದ ಬಗ್ಗೆ ಹೆಮ್ಮೆ ಮತ್ತು ಅಭಿಮಾನ ಪಡುವಂತಾಗಿದೆ. ಸಂಸ್ಕೃತ ಕಾವೇರಿಯು ಕರ್ನಾಟಕ-ದಕ್ಷಿಣದ ಸಂಘಟಿತ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ತಿಳಿಸಿದರು.
ಪ್ರಾಪಂಚಿಕ ಸಂಬಂಧ ಮತ್ತು ಮೋಹವನ್ನು ಮೀರಿ, ಸೃಷ್ಟಿಯ ಮೂಲ ಮತ್ತು ಉದ್ದೇಶವನ್ನು ತಿಳಿದು ತನ್ನ ತಪಸ್ಸಿನಿಂದ ಪಡೆದ ಸಿದ್ಧಿಯನ್ನು ಮನುಕುಲದ ಕಲ್ಯಾಣಕ್ಕಾಗಿ ವಿನಿಯೋಗಿಸುವವರು ಸಾಮಾಜಿಕ ಸುಧಾರಕರು ಎಂದು ತಿಳಿಸಿದರು.
ಕೆಲ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಸಮ್ಮೇಳನದ ಪಾತ್ರ ಬಹು ಮುಖ್ಯ. ಇಂಗ್ಲಿಷಿನ ವ್ಯಾಮೋಹದಿಂದ ಮುಂದಿನ ದಿನಗಳಲ್ಲಿ ಕನ್ನಡ ಮುಂತಾದ ಭಾರತೀಯ ಭಾಷೆಗಳು ಸಂಕಷ್ಟಕ್ಕೆ ತಲುಪುವ ಸಾಧ್ಯತೆ ಇದೆ. ಆದ್ದರಿಂದ ನಮ್ಮ ಸಂಸ್ಕೃತಿಯ ಮೂಲವಾದ ಸಂಸ್ಕೃತವನ್ನು ಬೆಳೆಸಿದಾಗ ಮಾತ್ರ ಉಳಿದ ಎಲ್ಲ ರಂಗಗಳಲ್ಲೂ ಭಾರತೀಯತೆ ಉಳಿಸಿಕೊಳ್ಳಲು ಸಾಧ್ಯ ಎಂದರು.
ಅಖಿಲ ಭಾರತೀಯ ಸಂಘಟನಾ ಮಂತ್ರಿ ಜಯಪ್ರಕಾಶ್ ಗೌತಮ್ ಮಾತನಾಡಿ, ಹೆಚ್ಚಿನ ಭಾರತೀಯ ಭಾಷೆಗಳ ಜನನಿ ಸಂಸ್ಕೃತ. ಭಾರತದ ಪ್ರತಿಷ್ಠೆ ಸಂಸ್ಕೃತ ಮತ್ತು ಸಂಸ್ಕೃತಿ ಎಂದರು.
ಸಂಸ್ಕೃತವು ಕಠಿಣ, ಸಂಸ್ಕೃತವು ಒಂದು ವರ್ಗಕ್ಕೆ ಮಾತ್ರ ಸೀಮಿತ. ಸಂಸ್ಕೃತದಲ್ಲಿ ದೋಷವಾದರೆ ಪಾಪವು ಬರುತ್ತದೆ... ಮುಂತಾದ ನಕಾರಾತ್ಮಕ ವಿಚಾರಗಳನ್ನು ಸಂಸ್ಕೃತ ಭಾರತಿಯು ನಿರ್ಮೂಲನೆ
ಮಾಡಿ ಸಕಾರಾತ್ಮಕ ಅಂಶಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸುಮಾರು 30 ದೇಶಗಳಲ್ಲಿ ಸಂಸ್ಕೃತ ಭಾರತಿಯ ಕಾರ್ಯ ನಡೆಯುತ್ತಿದೆ. ಸಂಸ್ಕೃತಕ್ಕಾಗಿ ಪ್ರತಿದಿನ ಕೆಲವು ಗಂಟೆಗಳನ್ನಾದರೂ ನೀಡುವ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಾತನಾಡಿ, ಸಂಸ್ಕೃತವು ಆಡುಭಾಷೆಯಾಗಿ ಪ್ರಚಲಿತವಾಗದಿದ್ದರೂ ಸಂಸ್ಕೃತದಿಂದ ಹುಟ್ಟಿದ ಹತ್ತಾರು ಭಾಷೆಗಳಲ್ಲಿ ಸಂಸ್ಕೃತದ ಛಾಪನ್ನು ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.
ಭಾರತೀಯರು ಸಂಸ್ಕೃತವನ್ನು ಅಭ್ಯಾಸ ಮಾಡಿದರೆ ಸಂಸ್ಕೃತಿಯು ಪ್ರವರ್ಧಮಾನಕ್ಕೆ ಬಂದು ಭಾರತಕ್ಕೆ ಜಗತ್ತಿನಲ್ಲಿ ಹೆಚ್ಚಿನ ಮಾನ್ಯತೆ ದೊರೆಯಲಿದೆ. ವಿದೇಶಿಗರು ಇಸ್ರೇಲ್ ದೇಶಕ್ಕೆ ಹೋದರೆ ಹಿಬ್ರೂ ಭಾಷೆಯನ್ನು ಕಲಿಸಿಯೇ ಅವರಿಗೆ ದೇಶದಲ್ಲಿ ಉಳಿಯುವ ಅವಕಾಶ ನೀಡುತ್ತಿದೆ. ಭಾರತೀಯ ಪ್ರಜ್ಞೆಯು ಸಂಸ್ಕೃತದ ಮೂಲಕ ಸಹಸ್ರಾರು ವರ್ಷಗಳಲ್ಲಿ ತನ್ನ ಹಿರಿಮೆಯನ್ನು ಮೆರೆದಿದೆ. ಎಲ್ಲ ಭಾರತೀಯರೂ ಸಂಸ್ಕೃತದ ಕಾರ್ಯದೊಂದಿಗೆ ಕೈಜೋಡಿಸಬೇಕು ಎಂದರು.
ಶಾಸಕ ಶ್ರೀವತ್ಸ ಮಾತನಾಡಿ, ಮೈಸೂರು ಅನೇಕ ಆಯಾಮಗಳಾದ ಕಲೆ, ಸಾಹಿತ್ಯ, ರಂಗಭೂಮಿ, ಸಂಸ್ಕೃತಿಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಇವತ್ತಿನ ಕಾಲಮಾನದಲ್ಲಿ ಎಲ್ಲ ಮಕ್ಕಳು ಎಂಬಿಬಿಎಸ್, ಇಂಜಿನಿಯರ್ ಮಾಡಬೇಕು ಎಂದು ಹೋಗುವವರ ಮಧ್ಯೆ 150 ಕ್ಕೂ ಹೆಚ್ಚು ಮಕ್ಕಳು ಸಂಸ್ಕೃತ ಕಲಿಯಲು ಗಣಪತಿ ಸಚ್ಚಿದಾನಂದ ಆಶ್ರಮ, ಸುತ್ತೂರಿಗೆ ಸೇರುತ್ತಿರುವುದು ಸಂತಸ ವಿಚಾರ ಎಂದರು.
ಪ್ರಮುಖರಾದ ಅ.ಮ.ಭಾಸ್ಕರ್, ಪ್ರೊ.ಪ.ನಾ.ಶಾಸ್ತ್ರಿ ಇತರರಿದ್ದರು.
ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಿಂದ ಗಣಪತಿ ಆಶ್ರಮದ ಅವರೆಗೆ ಶೋಭಾಯಾತ್ರೆ ನಡೆಸಲಾಯಿತು. ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಸಂಸ್ಕೃತ ಭಾರತಿ ಉಪಾಧ್ಯಕ್ಷ ದಿನೇಶ್ ಕಾಮತ್, ವೀಣಾವಾದಕರಾದ ರೇವತಿ ಕಾಮತ್, ಸಂಸ್ಕೃತ ಭಾರತಿ ಟ್ರಸ್ಟ್ ಅಧ್ಯಕ್ಷ ಮಹಾಬಲೇಶ್ವರರಾವ್ ಇತರರು ಭಾಗವಹಿಸಿದ್ದರು.
ಸಮ್ಮೇಳನ ಅಂಗವಾಗಿ ನಗರದ ನಾದಾಮೃತ ಸಂಗೀತ ವಿದ್ಯಾಲಯ, ಚಂಪಕ ಅಕಾಡೆಮಿ, ಭಾರತೀಯ ಯೋಗಧಾಮ ಗುರುಕುಲ, ವನಿ ಎಂ.ಭಟ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಸಮ್ಮೇಳನದ ಅಂಗವಾಗಿ ವಸ್ತು ಪ್ರದರ್ಶಿನಿ, ವಿಜ್ಞಾನ ಪ್ರದರ್ಶಿನಿ, ಸಂಸ್ಕೃತ ಪುಸ್ತಕ ಪ್ರದರ್ಶಿನಿ ಹಾಗೂ ಮಾರಾಟ ಮೇಳವೂ ಇತ್ತು.
ಫೆ.2ರ ಬೆಳಗ್ಗೆ 8.45ಕ್ಕೆ ‘ಸಂಸ್ಕೃತ ಭಾರತಿ ಒಂದು ಸಂಘಟನೆ’ ಕುರಿತು ಜಯಪ್ರಕಾಶ್ ಗೌತಮ್, ಡಾ.ಎಚ್.ವಿ.ನಾಗರಾಜರಾವ್ ಭಾಷಣ ಮಾಡಲಿದ್ದಾರೆ. ವಿದ್ವಾನ್ ಡಾ.ಟಿ.ಎನ್.ಪ್ರಭಾಕರ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4ಕ್ಕೆ ಆಯೋಜಿಸಿರುವ ಸಮಾರೋಪದಲ್ಲಿ ಪ್ರೊ.ಪ.ನಾ.ಶಾಸ್ತ್ರಿ, ಶಿಲ್ಪಿ ಅರುಣ್ ಯೋಗಿರಾಜ್, ಗುರುರಾವ್ ಕುಲಕರ್ಣಿ, ಸತ್ಯನಾರಾಯಣಭಟ್ ಭಾಗವಹಿಲಿಸ್ದಾರೆ.