ಸತ್ವ ಸಂರಕ್ಷಿಸಿಕೊಂಡು ಸಾಗುತ್ತಿರುವ ಏಕಮೇವ ಭಾಷೆ ಸಂಸ್ಕೃತ

10gkn1
Published on

ಗೋಕರ್ಣ: ನಮ್ಮ ದೇಶದ ಭಾಷಾ ಇತಿಹಾಸದಲ್ಲಿ ಹಲವಾರು ಭಾಷೆಗಳು ಕಾಲಾನುಕ್ರಮದಲ್ಲಿ ಜನೋಪಯೋಗದಿಂದ ದೂರವಾಗಿ ಅಪಾಯ ಎದುರಿಸುತ್ತ ಬಂದಿದೆ. ಆದರೆ, ಅನಾದಿಯಿಂದ ಭಾರತೀಯ ಸಂಸ್ಕೃತಿ- ಸಂಸ್ಕಾರ ರೂಪಿಸುವಲ್ಲಿ ಪ್ರಧಾನ ಕಾಣ್ಕೆ ಸಂಸ್ಕೃತ ಭಾಷೆ ತನ್ನ ಅಂತಃಶಕ್ತಿಯ ಪ್ರಭಾವದಿಂದ ಇಂದಿಗೂ ತನ್ನ ಸತ್ವ ಸಂರಕ್ಷಿಸಿಕೊಂಡು ಸಾಗುತ್ತಿರುವ ಏಕಮೇವ ಭಾಷಾ ಗೌರವಕ್ಕೆ ಪಾತ್ರವಾಗಿದೆ ಎಂದು ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ನುಡಿದರು.

ಭಾನುವಾರ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದ ವತಿಯಿಂದ ಆಯೋಜಿಸಲಾದ ಸಂಸ್ಕೃತ ಪ್ರದೀಪ ಪುರಸ್ಕಾರ ಮತ್ತು ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬರ್ಗಿ ಪ್ರೌಢಶಾಲೆ ಮೂಲಕ ಸಂಸ್ಕೃತ ಭಾಷಾ ಅಭಿವೃದ್ಧಿಗೆ ನಾನಾ ಬಗೆಯಲ್ಲಿ ಪ್ರಯತ್ನಿಸಿ ಸಮಾಜದ ಎಲ್ಲ ವರ್ಗಕ್ಕೆ ಸಂಸ್ಕೃತ ಭಾಷೆಯ ಸೊಗಡನ್ನು ಮುಟ್ಟಿಸಲು ನಿರಂತರ ಪ್ರಯತ್ನಿಸುತ್ತಿರುವ ಅಧ್ಯಾಪಕ ಮಂಜುನಾಥ ಗಾಂವಕರ ಅವರ ಶ್ರಮವನ್ನು ಶ್ಲಾಘಿಸಿದರು.

ಪ್ರೌಢಶಾಲೆಯ ಸಂಸ್ಕೃತ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಫಲಕ ಮತ್ತು ಪದಕವಿತ್ತು ಸಂಸ್ಕೃತ ಪ್ರದೀಪ ಪುರಸ್ಕಾರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬರ್ಗಿ ಗ್ರಾಮದ ವಿವಿಧ ಅಭಿವೃದ್ಧಿಗೆ ಕಳೆದ ಹಲವು ದಶಕಗಳಿಂದ ಅವಿರತವಾಗಿ ತಮ್ಮದೇ ಕೊಡುಗೆ ಸಲ್ಲಿಸಿದ ಹಿರಿಯರಾದ ಅನಂತರಾಜ ಸೀತಾರಾಮ ಹಂದೆ ದಂಪತಿಗೆ ನಾಗರಿಕ ಸನ್ಮಾನವಿತ್ತು ಗೌರವಿಸಲಾಯಿತು. ಗ್ರಾಮದ ದೇವಾಲಯಗಳು ಮತ್ತು ಇನ್ನಿತರ ವ್ಯವಸ್ಥೆಗಳ ಏಳಿಗೆಗಾಗಿ ಅನಂತರಾಜ ಅವರು ಮಾಡಿದ ಪ್ರಯತ್ನಗಳನ್ನು ಅನೇಕರು ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ವಿದ್ಯಾಪೀಠದ ಅಧ್ಯಕ್ಷ ಬಿ.ಎನ್. ಗಾಂವಕರ, ಡಯಟ್ ನಿವೃತ್ತ ಉಪನ್ಯಾಸಕ ಬಿ.ಎಸ್. ಗೌಡ, ವಿಶ್ರಾಂತ ಶಿಕ್ಷಕರ ಬಳಗದ ಎನ್.ಬಿ. ನಾಯಕ ಸೂರ್ವೆ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸುಧೀರ ನಾಯಕ ಮಾತನಾಡಿದರು.</p><p>ತಾಪಂ ಮಾಜಿ ಅಧ್ಯಕ್ಷೆ ವಿಜಯಾ ಪಟಗಾರ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ನಾಯ್ಕ, ಪ್ರಧಾನ ಕಾರ್ಯದರ್ಶಿ ರಮೇಶ ಜಯರಾಮ ನಾಯ್ಕ, ಯಕ್ಷಗುರು ಹನುಮಂತ ನಾಯ್ಕ, ಶಿಕ್ಷಕ ಮೋಹನ ನಾಯ್ಕ, ವಾಮನ ಪಟಗಾರ, ಪ್ರೌಢಶಾಲೆ ಮುಖ್ಯಾಧ್ಯಾಪಕ ಶಿವಚಂದ್ರ ಮತ್ತಿತರರಿದ್ದರು. ಅಧ್ಯಾಪಕ ಮಂಜುನಾಥ ಗಾಂವಕರ ಬರ್ಗಿ ಸಂಘಟಿಸಿ ನಿರ್ವಹಿಸಿದರು. ಪಾಂಡು ನಾಯ್ಕ, ಗೀತಾ ನಾರಾಯಣ, ಭವ್ಯಾ ಗಾವಡಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net