

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಸ್ಕೃತ ಸಂಸ್ಕೃತಿಯ ಪ್ರತೀಕವಾಗಿದೆ. ಅಂತಹ ಸಂಸ್ಕೃತವನ್ನು ಉಳಿಸಿ, ಬೆಳೆಸುವಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಸಂಸ್ಕೃತಿ ಶಿಕ್ಷಣ ಶಿಶುಮಂದಿರದ ಸಂಸ್ಥಾಪಕ ಸಂಚಾಲಕಿ ಮೃಣಾಲ ಜೋಶಿ ಹೇಳಿದರು.
ನಗರದ ಕೆ.ಎನ್.ಕೆ ಬಾಲಕಿಯರ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಂಸ್ಕೃತ ವಿಷಯದಲ್ಲಿ ಅತ್ಯಧಿಯ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ "ಸಂಸ್ಕೃತ ಪ್ರತಿಭಾ ಪುರಸ್ಕಾರ' ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಸ್ಕೃತದಿಂದ ಪ್ರಯೋಜನವಿಲ್ಲ ಎಂದು ಕೈ ಬಿಟ್ಟರೆ, ನಮ್ಮ ಸಂಸ್ಕೃತಿಯನ್ನೇ ನಾವು ಮರೆತಂತಾಗುತ್ತದೆ. ಅದೇ ರೀತಿ ಪ್ರತಿಯೊಬ್ಬರೂ ನಿತ್ಯ ಸಂಸ್ಕೃತ, ಸಂಸ್ಕೃತಿ ಉಳಿವಿಗೆ ಭಗವದ್ಗೀತೆ, ರಾಮಾಯಣ, ಮಹಾಭಾರತದಂತಹ ಮಹಾನ್ ಕಾವ್ಯಗಳನ್ನು ಅಧ್ಯಯನ ಮಾಡಬೇಕು. ಕೇವಲ ಹೆಚ್ಚು ಅಂಕಗಳನ್ನು ಪಡೆಯಲು ಸಂಸ್ಕೃತ ಕಲಿಯಬೇಡಿ. ಸಂಸ್ಕೃತವು ಭಾರತೀಯ ಸರ್ವ ಭಾಷೆಗಳ ಜನನಿ. ಸಂಸ್ಕೃತದಿಂದ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದರು.
ಸಂಸ್ಕೃತವು ವಿಶ್ವ ಮಾನ್ಯ ಭಾಷೆಯಾಗುವ ಸಾಮರ್ಥ್ಯ ಪಡೆದಿದೆ. ವಿದೇಶಿಗರು ಸಂಸ್ಕೃತವನ್ನು ಹೆಚ್ಚೆಚ್ಚು ಅಧ್ಯಯನ ಮಾಡುತ್ತಿರುವಾಗ ನಮ್ಮ ದೇಶದಲ್ಲಿ ಸಂಸ್ಕೃತ ಭಾಷೆಯನ್ನು ಕಡೆಗಣಿಸಿರುವುದು ನಮ್ಮ ದೌರ್ಭಾಗ್ಯ ಎಂದರು.
ಮಂಜುನಾಥ ಮಕ್ಕಳಗೇರಿ ಮಾತನಾಡಿ, ಛತ್ರಪತಿ ಶಿವಾಜಿ, ಸ್ವಾಮಿವಿವೇಕಾನಂದ ಅವರಂತಹ ಆದರ್ಶ ವ್ಯಕ್ತಿಗಳ ಜೀವನ ಅರಿತು ಅವರಂತೆಯೇ ನಾವೂ ಆದರ್ಶ ವ್ಯಕ್ತಿಗಳಾಗಲು ಪ್ರಯತ್ನಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಕಾಂತ ಪಾಟೀಲ ಮಾತನಾಡಿ, ಸಂಸ್ಕೃತವು ದೇವ ಭಾಷೆಯಾಗಿದ್ದು, ದೇವನಾಗರಿ ಲಿಪಿ ಹೊಂದಿದೆ. ಸಂಸ್ಕೃತ ಮತ್ತು ಸಂಸ್ಕೃತಿ ಉಳಿವಿಗೆ ಎಲ್ಲರೂ ಶ್ರಮಿಸಿ ಸಂಸ್ಕಾರವಂತರಾಗಬೇಕು ಎಂದರು.
ಹುಬ್ಬಳ್ಳಿ, ಧಾರವಾಡ, ಗದಗ, ವಿಜಯಪುರ, ಹಾವೇರಿ ಜಿಲ್ಲೆಗಳ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯಾಧ್ಯಾಪಕಿ ಸುಜಾತಾ ಬಾಸೂರ, ವಿನಾಯಕ ಜೋಶಿ, ಹರ್ಷ ಆಚಾರ್ಯ, ಅಭಿನಂದನ, ಇತರರು ಇದ್ದರು.
ಎನ್.ಎನ್. ಸವಣೂರ ಸ್ವಾಗತಿಸಿದರು. ಜಿ. ಆರ್. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಣುಕಾ ಜೋಶಿ ಹಾಗೂ ಶ್ರೀದೇವಿ ದೇಶಪಾಂಡೆ ನಿರೂಪಿಸಿದರು. ಮಹೇಶ ಭಟ್ಟ ವಂದಿಸಿದರು.