

ಚಿಕ್ಕೋಡಿ: ವಕ್ಫ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನ.21ರಂದು ಚಿಕ್ಕೋಡಿ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಕೈಗೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ ತಿಳಿಸಿದರು.
ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಭೂಮಿ-ನಮ್ಮ ಹಕ್ಕು ಘೋಷವಾಕ್ಯದಡಿ ಜನ ಜಾಗೃತಿ ಆಂದೋಲನ ನಡೆಸುವ ಮೂಲಕ ತೊಂದರೆಗೊಳಗಾದ ಮಠ-ಮಂದಿರಗಳು ಹಾಗೂ ರೈತರನ್ನು ಬರಮಾಡಿಕೊಂಡು ಅಹವಾಲು ಸ್ವೀಕರಿಸುತ್ತೇವೆ ಎಂದರು.
ವಕ್ಫ್ ಸಮಸ್ಯೆಯ ಗಂಭೀರತೆ ಪರಾಮರ್ಶಿಸಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದಲ್ಲಿ ಮೂರು ತಂಡ ಹಾಗೂ ಪ್ರತಿ ಜಿಲ್ಲೆಯಲ್ಲೂ 5 ಜನರ ತಂಡ ರಚಿಸಲಾಗಿದೆ. ಡಿಸೆಂಬರ್ ಮೊದಲ ವಾರದಿಂದ ಈ ತಂಡಗಳು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜನರ ಸಮಸ್ಯೆ ಆಲಿಸಲಿವೆ ಎಂದು ಮಾಹಿತಿ ನೀಡಿದರು.
ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷ ಶಾಂಭವಿ ಅಶ್ವಥಪುರ, ಕೃಷಿ ಮೋರ್ಚಾ ಜಿಲ್ಲಾಧ್ಯಕ್ಷ ರಾಜು ಹರಗನ್ನವರ, ಸಂಜಯ ಪಾಟೀಲ, ಅಪ್ಪಾಸಾಹೇಬ ಚೌಗಲೆ, ಶಕುಂತಲಾ ಡೋನವಾಡೆ, ಶಿವಾನಂದ ನವನಾಳೆ, ಕುಮಾರ ಮಹಾಜನ್, ರಾವಸಾಹೇಬ ಕಮತೆ ಇತರರಿದ್ದರು.