ವಿಶ್ವಮಟ್ಟದಲ್ಲಿ ಸಂಸ್ಕೃತದ ಅಧ್ಯಯನಕ್ಕೆ ಬೇಡಿಕೆ ಹೆಚ್ಚಾಗಿದೆ

3
Published on

ವಿಶ್ವಮಟ್ಟದಲ್ಲಿ ಸಂಸ್ಕೃತ ಭಾಷಾ ಅಧ್ಯಯನ ಮತ್ತು ಅನುಸಂಧಾನಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ಸಂಸ್ಕೃತ ಭಾರತಿ ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಭಟ್ ಹೇಳಿದರು.

ಸಂಸ್ಕೃತ ಭಾರತಿ ಕರ್ನಾಟಕ ದಕ್ಷಿಣವು ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಸಂಸ್ಕೃತ ಕಾವೇರಿ - ಎರಡು ದಿನಗಳ ಪ್ರಾಂತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು. ಪ್ರಾಥಮಿಕ ಶಾಲೆಯಿಂದ ಪದವಿ ಹಂತದ ವರೆಗೆ ಸಂಸ್ಕೃತದ ಪಠ್ಯವು ಸಿದ್ಧವಾಗುತ್ತಿದೆ. ಸಂಸ್ಕೃತವನ್ನು ಕಲಿಯಬೇಕು ಎಂದು ಶ್ರೀಸಾಮಾನ್ಯರಲ್ಲಿ ಆಸಕ್ತಿ ಹೆಚ್ಚುತ್ತಿದೆ ಎಂದರು.

ಸಂಸ್ಕೃತದ ನಿಮಿತ್ತವಾಗಿ ನಮ್ಮ ದೈನಂದಿನ ಜೀವನದಲ್ಲಿ ಕೆಲವು ಘಂಟೆಗಳನ್ನಾದರೂ ಮೀಸಲಿಡಬೇಕು. ಸಂಸ್ಕೃತಕ್ಕೆ ಸಮಯದಾನ ಮಾಡಬೇಕು. ವೃತ್ತಿಯಿಂದ ನಿವೃತ್ತರಾದವರು ಪೂರ್ಣಕಾಲಿಕರಾಗಿ ಸಂಸ್ಕೃತ ಸೇವೆಗೆ ಸಿದ್ಧರಾಗುವ ಸಂಕಲ್ಪ ಮಾಡಬೇಕು ಎಂದರು.

ಎಲ್ಲರೂ ಕೈಜೋಡಿಸೋಣ: ಸಂಸ್ಕೃತ ಆಂದೋಲನದ ಸಂಸ್ಥಾಪಕರು ದೀರ್ಘಕಾಲಿಕ ಚಿಂತನೆಯನ್ನು ಹೊಂದಿ ಸಮರ್ಪಣೆಯ ಆಧಾರದಲ್ಲಿ ಸಂಸ್ಕೃತ ಭಾರತಿ ಸಂಘಟನೆಯನ್ನು ಕಟ್ಟಿದ್ದಾರೆ. ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಗನ್ನು ಸಂಸ್ಕೃತದ ಕಾರ್ಯಕರ್ತರು ತಮ್ಮದನ್ನಾಗಿಸಿಕೊಳ್ಳಬೇಕು. ದೇಶದ ಪ್ರತಿ ಮನೆಯೂ ‘ಸಂಸ್ಕೃತ ಗೃಹ’ ವಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಂಸ್ಕೃತದ ಸೇವೆಗೆ ಕೈಜೋಡಿಸೋಣ ಎಂದು ಸತ್ಯನಾರಾಯಣ ಭಟ್ ಹೇಳಿದರು.

ನವ ಚೈತನ್ಯವನ್ನು ನೀಡಿದೆ: ಪ್ರೊ.ಪ.ನಾ.ಶಾಸ್ತ್ರಿ

ಸಂಸ್ಕೃತ ಭಾರತಿಯ ಕರ್ನಾಟಕ ದಕ್ಷಿಣ ಅಧ್ಯಕ್ಷ ಪ್ರೊ.ಪ.ನಾ.ಶಾಸ್ತ್ರಿ ಮಾತನಾಡಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಪನ್ನಗೊಂಡ ‘ಸಂಸ್ಕೃತ ಕಾವೇರಿ’ ಸಮ್ಮೇಳನವು ಸಂಸ್ಕೃತ ಕಾರ್ಯಕರ್ತರಿಗೆ ನವ ಚೈತನ್ಯ ನೀಡಿದೆ ಎಂದರು. ಮೈಸೂರಿನ ರಾಜಮನೆತನ ಮತ್ತು ಮಹಾಜನರು ವಿಶೇಷ ಪ್ರೀತಿಯಿಂದ ಸಂಸ್ಕೃತವನ್ನು ಶತಮಾನಗಳಿಂದ ಪೋಷಿಸುತ್ತಿರುವುದು ಶ್ಲಾಘನೀಯ ಎಂದರು.

ಮೆರುಗನ್ನು ಹೆಚ್ಚಿಸಿದೆ: ಕರ್ನಾಟಕ ದಕ್ಷಿಣ ಪ್ರಾಂತದ 12 ಜಿಲ್ಲೆಗಳಿಂದ ಒಂದು ಸಾವಿರ ಪ್ರತಿನಿಧಿಗಳು ತಮ್ಮದೇ ಖರ್ಚಿನಲ್ಲಿ ಆಗಮಿಸಿ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಸಮ್ಮೇಳನದ ಪೂರ್ವಭಾವಿಯಾಗಿ ಮೈಸೂರಿನ 15 ಕೇಂದ್ರಗಳಲ್ಲಿ 10 ದಿನಗಳ ಉಚಿತ ಸಂಸ್ಕೃತ ಸಂಭಾಷಣ ಶಿಬಿರಗಳನ್ನು ಸಂಸ್ಕೃತಭಾರತಿ ಆಯೋಜಿಸಿದ್ದು ಸಮ್ಮೇಳಕ್ಕೆ ಪೂರಕವಾಯಿತು ಎಂದರು. ಮಕರಸಂಕ್ರಾತಿಯಿಂದ ಮೈಸೂರಿನಲ್ಲಿ ಸಂಸ್ಕೃತದ ನವೋತ್ಥಾನ ಕಾಲ ಆರಂಭವಾಗಿದೆ. ಜ್ಞಾನಕುಂಭ ಹೆಸರಿನ ಪ್ರದರ್ಶಿನಿ ಮಹಾಕುಂಭದ ಪರ್ವಕಾಲದಲ್ಲಿ ಅತ್ಯಂತ ಅರ್ಥಪೂರ್ಣವಾಗಿದೆ. ಶೋಭಾಯಾತ್ರೆ, ಸಾರ್ವಜನಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೂರಾರು ಜನರು ಭಾಗವಹಿಸಿ ಸಮ್ಮೇಳನದ ಮೆರುಗನ್ನು ಹೆಚ್ಚಿಸಿದ್ದು ಧನ್ಯತೆ ಮೂಡಿಸಿದೆ ಎಂದು ಪ್ರೊ.ಪ.ನಾ.ಶಾಸ್ತ್ರಿ ಹೇಳಿದರು.

ಆಶ್ರಮದ ಸೇವೆ ದೊಡ್ಡದು: ಶಾಸಕ ಟಿ.ಎಸ್.ಶ್ರೀವತ್ಸ

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಸಂಸ್ಕೃತ ಕಾವೇರಿ ಸಮ್ಮೇಳನಕ್ಕೆ ಸ್ಥಳ, ಆಹಾರ ಸೇರಿದಂತೆ ವಿವಿಧ ಸವಲತ್ತು ಗಳನ್ನು ಉದಾರವಾಗಿ ಮತ್ತು ಉಚಿತವಾಗಿ ನೀಡಿರುವ ಗಣಪತಿ ಸಚ್ಚಿದಾನಂದ ಆಶ್ರಮದ ಸೇವೆ ದೊಡ್ಡದು ಎಂದರು.

ಸಂಗೀತಕ್ಕೆ ವಿವಿಧ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವಿದೆ ಎಂದು ಸಾಬೀತುಪಡಿಸಿರುವ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಕೋವಿಡ್ ಸಂದರ್ಭನಿತ್ಯ 10, 000 ಆಹಾರದ ಪೊಟ್ಟಣವನ್ನು ಬಡವರಿಗೆ ನೀಡಿದ್ದರು. ಪ್ರಸ್ತುತ ಸಂಸ್ಕೃತ ಸಮ್ಮೇಳನ ಯಶವಾಗಲು ಉಭಯ ಶ್ರೀಗಳೂ ಅನುಗ್ರಹಿಸಿದ್ದು ಮಾದರಿಯಾಗಿದೆ ಎಂದರು.

ಶಿಲ್ಪಕಲೆಗೆ ಪ್ರೇರಣೆ: ಶಿಲ್ಪಿ ಅರುಣ್ ಯೋಗಿರಾಜ್

ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ, ಮೈಸೂರಿಗೆ ತನ್ನದೇ ಆದ ಪರಂಪರೆ, ಸಂಸ್ಕೃತಿ ಇದೆ. ಸಂಸ್ಕೃತ ಕಾವೇರಿ ಸಮ್ಮೇಳನ ಭೂಷಣಪ್ರಾಯವಾಗಿದೆ . ಸಂಸ್ಕೃತ ಮತ್ತಷ್ಟು ಪ್ರಚಾರ ಪಡೆದು ವಿಶ್ವವ್ಯಾಪಿಯಾಗಲಿ ಎಂದು ಆಶಿಸಿದರು. ಶಿಲ್ಪಕಲೆಗೆ ಗಣಪತಿ ಸಚ್ಚಿದಾನಂದ ಆಶ್ರಮ ಸದಾ ಪ್ರೇರಣೆ ಮತ್ತು ಪೋಷಣೆ ನೀಡಿದೆ. ನನ್ನ ಗುರು- ಹಿರಿಯರು ಶಿಲ್ಪ ಶಾಸ್ತ್ರದೊಂದಿಗೆ ಸಂಸ್ಕೃತವನ್ನೂ ಕಲಿತಿದ್ದರು. ಶ್ರೀರಾಮನ ಮೂರ್ತಿ ಮತ್ತು ಶಂಕರಾಚಾರ್ಯರ ಪ್ರತಿಮೆಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಿದ್ದೆ. ಪ್ರಧಾನಿ ಮೋದಿಯವರೂ ನನ್ನ ಕಾರ್ಯ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಎಂಬುದು ಹೆಮ್ಮೆ ಮೂಡಿಸಿದೆ ಎಂದರು. ಯಾವುದೇ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ, ಭಗವಂತನ ಅನುಗ್ರಹ ನಿಶ್ಚಯವಾಗಿ ದೊರೆಯುತ್ತದೆ. ಸಂಸ್ಕೃತ ಭಾಷೆಯ ಪೋಷಣೆಗೂ ಇದು ಅನ್ವಯ ಎಂದು ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದರು.

ಸಮ್ಮೇಳನದ ಸಂಚಾಲಕ ಡಾ.ರುಕ್ಮಾಂಗದ ಆರ್ಯ, ಪ್ರಾಂತ ಮಂತ್ರಿ ಗುರುರಾವ್ ಕುಲಕರ್ಣಿ, ಹಿರಿಯ ನ್ಯಾಯವಾದಿ ಅ.ಮ.ಭಾಸ್ಕರ ಇತರರಿದ್ದರು. ಇದೇ ವೇಳೆ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net