ವಿಕೃತಿಯನ್ನು ಆಕೃತಿಯೆಡೆಗೆ ಒಯ್ಯುವುದೇ ಸಂಸ್ಕಾರ

3kmt4_Katgal
Published on

ಕುಮಟಾ: ವಿವಿಧ ಸ್ತರದಲ್ಲಿ ಸಂಸ್ಕಾರ ಪಡೆದ ಹಾಲು ಕೊನೆಯಲ್ಲಿ ತುಪ್ಪವಾದಂತೆ, ವಿಕೃತಿಯನ್ನು ಆಕೃತಿಯೆಡೆಗೆ ಕರೆದೊಯ್ಯುವುದೇ ಸಂಸ್ಕಾರ. ಅಪ್ರಕಟಿತ ಸ್ವರಗಳಿಗೆ ಮೂರ್ತ ರೂಪವನ್ನು ಕೊಡುವುದೇ ನಾದ ಸಂಸ್ಕಾರ. ಅದನ್ನು ತಿಳಿಸಿ ಕೊಡುವವನೇ ಗುರು. ಉತ್ತಮ ಸಾಧಕರ ಮಾರ್ಗದರ್ಶನದಿಂದ ಅಸಂಸ್ಕೃತರೂ ಸುಸಂಸ್ಕೃತರಾಗಿ ಸಿದ್ಧರಾಗುತ್ತಾರೆ. ಸಮಾಜಕ್ಕೆ ಅಂತಹ ನೇತೃತ್ವದ ಅವಶ್ಯಕತೆ ಹೆಚ್ಚಿದೆ ಎಂದು ಸೆಲ್ಕೋ ಸೋಲಾರನ ಸಿಇಒ ಮೋಹನ ಭಾಸ್ಕರ ಹೆಗಡೆ ಹೆರವಟ್ಟಾ ಹೇಳಿದರು.

ಕತಗಾಲದ ಸತ್ಸಂಗ ಭವನದಲ್ಲಿ ಕಲಾಶ್ರೀ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ, ವಸತಿಸಹಿತ ನಾದಮಯ ಸಂಸ್ಕಾರ ಶಿಬಿರ ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ಸ್ತೋತ್ರ ಪ್ರಶಿಕ್ಷಕಿ ಧಾರವಾಡದ ಸುವರ್ಣಾ ದೇಸಾಯಿ ಮಾತನಾಡಿ, ಜೀವನ ಶಿಕ್ಷಣ ಕಲೆ ಬೋಧಿಸುವ, ಯೋಗ, ಈಜು, ಸುಭಾಷಿತ, ಸ್ತೋತ್ರ, ಸಂಗೀತ, ವೇದಗಣಿತ, ಅಮರಕೋಶ, ಭಗವದ್ಗೀತೆ, ಭಜನೆ, ಚಿತ್ರಕಲೆ, ಪಂಚಾಂಗ ಪರಿಚಯ ಮುಂತಾದ ವಿಷಯಗಳನ್ನು ಸಮಯಮಿತಿಯಲ್ಲಿ ಬೋಧಿಸುವ ಈ ಶಿಬಿರ ಅಸಾಧಾರಣವಾಗಿದೆ. ಶಿಬಿರಕ್ಕಾಗಿಯೇ ಪ್ರತಿವರ್ಷ ಪಠ್ಯಪುಸ್ತಕ ರಚಿಸುವ ಕಲಾಶ್ರೀ ಸಂಸ್ಥೆ ಏಕಮೇವಾದ್ವಿತೀಯವಾಗಿದೆ ಎಂದರು.

ಶಿಬಿರ ಸಂಯೋಜಕ ಡಾ. ಕೆ. ಗಣಪತಿ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಎಚ್.ಎನ್. ಅಂಬಿಗ ಸ್ವಾಗತಿಸಿದರು. ಕೌಷಿಕ ಷಡಕ್ಷರಿ, ಮಾರುತಿ ನಾಯ್ಕ, ಗಂಗಾಧರ ಮರಾಠಿ, ಕಾವೇರಿ ಮುಗದೂರ, ಸುಮಂಗಲಾ ಭಟ್ಟ, ಅಂಜಲಿ ನಾಯಕ, ಭಾರತಿ ಗೌಡ, ವೆಂಕಟರಮಣ ಹೆಗಡೆ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net