ಸಂಸ್ಕಾರ ಬೆಳೆಸುವಲ್ಲಿ ಸ್ತ್ರೀಯರ ಪಾತ್ರ ಮಹತ್ವದು

Kurgodu Sree
ಕುರುಗೋಡಿನ ಕೊಟ್ಟೂರು ಸ್ವಾಮಿ ಶಾಖಾ ವಿರಕ್ತ ಮಠದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿ ಬಸವಲಿಂಗ ಸ್ವಾಮೀಜಿ, ಶ್ರೀಮಠದ ಪೀಠಾಧಿಪತಿ ನಿರಂಜನ ಪ್ರಭು, ಶ್ರೀಧರಗಡ್ಡೆಯ ಮರಿ ಕೊಟ್ಟೂರು ದೇಶಿಕರು, ಶಾಸಕ ಜೆಎನ್.ಗಣೇಶ್ ಇದ್ದರು.
Published on

ಕುರುಗೋಡು: ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೇರೇಪಿಸಿದ್ದು ಭಕ್ತಿ ಮತ್ತು ಧಾರ್ಮಿಕ ಚಳವಳಿ ಎಂದು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿ ಬಸವಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಕೊಟ್ಟೂರು ಸ್ವಾಮಿ ಶಾಖಾ ಸಂಸ್ಥಾನ ಮಠದಲ್ಲಿ ಭಾನುವಾರ ಆಯೋಜಿಸಿದ್ದ ದೇವಿಪುರಾಣ ಮಂಗಲ ಹಾಗೂ 1001 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಧರ್ಮಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು.

ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸಿ ಬೆಳೆಸುವಲ್ಲಿ ಸ್ತ್ರೀಯರ ಪಾತ್ರ ಪ್ರಮುಖವಾಗಿದೆ. ದೇವಿಪುರಾಣದಲ್ಲಿ ಬರುವ ಬಹುತೇಕ ಸನ್ನಿವೇಶಗಳು ಇದಕ್ಕೆ ಪುಷ್ಟಿ ನೀಡುತ್ತವೆ ಎಂದ ಅವರು, ಕೊಟ್ಟೂರು ಸ್ವಾಮಿ ಮಠ ಒಂದು ಜಾತಿ, ಮತ, ಪಂಥಕ್ಕೆ ಸೀಮಿತವಾಗಿಲ್ಲ. ಎಲ್ಲರನ್ನು ಒಂದೇ ದೃಷ್ಟಿಕೋನದಲ್ಲಿ ನೋಡುತ್ತಿದೆ. ಅನ್ನ ಮತ್ತು ಅಕ್ಷರ ದಾಸೋಹ ಕಾಯಕದಲ್ಲಿ ಶ್ರೀಮಠ ತೊಡಗಿಸಿಕೊಂಡಿದೆ ಎಂದರು.

ಶ್ರೀಮಠದ ಪೀಠಾಧಿಪತಿ ನಿರಂಜನ ಪ್ರಭು ಸ್ವಾಮೀಜಿ ಮಾತನಾಡಿ, ದೇವಿಪುರಾಣ ಕೇಳಿದವರು ತಾಮಸಗುಣಗಳನ್ನು ತೊರೆದು ಸಾತ್ವಿಕ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಬಾಲ್ಯವಿವಾಹ ಮಾಡಿ ಹೆಣ್ಣು ಮಕ್ಕಳ ಜೀವನ ಹಾಳು ಮಾಡದೆ ಉತ್ತಮ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶರಣಬಸವ, ಮಠದ ಸೇವಾ ಸದಸ್ಯರಾದ ಎಸ್.ಟಿ.ಎಂ.ಸದಾಶಿವಯ್ಯ ಸ್ವಾಮಿ, ಟಿ.ಮಲ್ಲೇಶಪ್ಪ, ಸಿಂದಗಿ ಗವಿಸಿದ್ದಪ್ಪ, ಚಾನಾಳು ಆನಂದ, ಚಾನಾಳು ಅಂಬರೀಷ್, ಎರ‌್ರಿಸ್ವಾಮಿ, ಚಾನಾಳು ಅಭಿಷೇಕ್, ಟಿ.ಸುರೇಶಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net