

ಜಮಖಂಡಿ: ಸ್ಕಾರವಂತರಾದರೆ ಮಾತ್ರ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಏ.29ರ ವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ, ಸದ್ಭಾವನಾ ಪಾದಯಾತ್ರೆ ಅಂಗವಾಗಿ ಮಂಗಳವಾರ ಸಂಜೆ ಆಯೋಜಿಸಿದ್ದ ವಚನ ಜಾತ್ರಾ ಮಹೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಚಿಂತನೆಯ ಮೂಲಕ ಎಲ್ಲರನ್ನೂ ಪುನೀತರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಸದ್ಭಾವನಾ ಪಾದಯಾತ್ರೆ ಕೈಗೊಂಡು ದುಶ್ಚಟಗಳ ಭಿಕ್ಷೆ ಬೇಡುವ ಹಾಗೂ ಸದ್ಗುಣಗಳ ದೀಕ್ಷೆ ನೀಡುವ ಮಠದ ಸತ್ಕಾರ್ಯ ಶ್ಲಾಘನೀಯವಾಗಿದೆ. ದೇವರಿಗೆ ಮೊರೆ ಹೋದರೆ ಮಾತ್ರ ಸುಖ, ಶಾಂತಿ, ನೆಮ್ಮದಿ ದೊರೆಯಲು ಸಾಧ್ಯ ಎಂದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮುಖ್ಯ ಅತಿಥಿಯಾಗಿ ಮಾತನಾಡಿ, ಜಮಖಂಡಿ ಆಧ್ಯಾತ್ಮಿಕ ಕ್ಷೇತ್ರದ ಕೇಂದ್ರವಾಗಿದೆ. ಜಗತ್ತಿಗೆ ಆಧ್ಯಾತ್ಮಿಕ ಸಂದೇಶಗಳು ಜಮಖಂಡಿ ಮೂಲಕ ಸಾಗುತ್ತವೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ ಮಾತನಾಡಿ, ವಿಜಯ ಮಹಾಂತೇಶ ಸಂಸ್ಥಾನ ಮಠದ ಮಹಾಂತ ಜೋಳಿಗೆಯ ಪರಿಕಲ್ಪನೆಯನ್ನು ಜಮಖಂಡಿಯಲ್ಲಿ ಅನುಷ್ಠಾನಗೊಳಿಸುತ್ತಿರುವುದು ಸಂತಸದ ಸಂಗತಿ. ಪುರಾತನ ಮಠವಾಗಿರುವ ಓಲೇಮಠ ಜಮಖಂಡಿ ನಗರಕ್ಕೆ ಕಳಶಪ್ರಾಯವಾಗಿದೆ ಎಂದರು.
ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಮಾತನಾಡಿ, ಸುಳ್ಳು ಹೇಳುವುದಿಲ್ಲ, ಯಾರೊಂದಿಗೆ ಜಗಳ ಕಾಯುವುದಿಲ್ಲ, ಯಾವುದೇ ದುಶ್ಚಟ ಮಾಡುವುದಿಲ್ಲ ಎಂಬ ಸಂಕಲ್ಪದೊಂದಿಗೆ ಜೀವನವನ್ನು ಪವಿತ್ರ ಮಾಡಿಕೊಳ್ಳಬೇಕು ಎಂದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ನಾಯಕರು. ಆದ್ದರಿಂದ ಇಂದಿನ ಮಕ್ಕಳಿಗೆ ಸಂಸ್ಕಾರ ನೀಡುವುದು ಬಹಳ ಮುಖ್ಯವಾಗಿದೆ ಎಂದರು.
ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಮು ಶಿರೋಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಿರಿಯ ವಕೀಲ ಡಾ. ತಾತಾಸಾಹೇಬ ಬಾಂಗಿ ಮಾತನಾಡಿದರು. ಝುಂಜರವಾಡದ ಬಸವರಾಜೇಂದ್ರ ಶರಣರು ಪ್ರವಚನ ನೀಡಿದರು. ಗಾಣಿಗ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಕೆ.ಕೆ. ತುಪ್ಪದ, ಲೆಕ್ಕಪರಿಶೋಧಕ ಗಿರೀಶ ಬಾಂಗಿ ಇದ್ದರು.
ನಿಖಿತಾ ಹಿರೇಮಠ, ಸಾನ್ವಿ ಬನ್ನಿಗಿಡದ ವಚನ ಪ್ರಾರ್ಥನೆ ಗೀತೆ ಹಾಡಿದರು. ಎಸ್.ವೈ. ಪಾಟೀಲ ಸ್ವಾಗತಿಸಿದರು. ಮುಖ್ಯಶಿಕ್ಷಕ ಶಂಕರ ಲಮಾಣಿ ನಿರೂಪಿಸಿದರು. ಓಲೇಮಠದ ಆನಂದ ದೇವರು ಶರಣು ಸಮರ್ಪಿಸಿದರು.