

ನರೇಗಲ್ಲ: ಜೀವನದಲ್ಲಿ ನೆಮ್ಮದಿ ಪಡೆಯಬೇಕಾದರೆ ಸಂಸ್ಕಾರ, ಸಂಸ್ಕೃತಿಗಳು ಮುಖ್ಯವಾಗಿವೆ. ಸಂಸ್ಕಾರ- ಸಂಸ್ಕೃತಿಗಳು ಮನುಷ್ಯನ ಎರಡು ಕಣ್ಣುಗಳಿದ್ದಂತೆ ಎಂದು ಹಾಲಕೆರೆ ಶ್ರೀಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಹಾಲಕೆರೆ ಸಂಸ್ಥಾನ ಮಠದ 174ನೇ ಜಾತ್ರಾ ಮಹೋತ್ಸವದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಈ ಭಾಗದಲ್ಲಿ ನೆಲೆಸಿರುವ ಶ್ರೀ ಅನ್ನದಾನೇಶ್ವರ ಮಠವು ಮೂಲತಃ ಅಲ್ಲಮ ಪ್ರಭುವಿನ ಪ್ರೇರಣೆಯಿಂದ ರಚನೆಗೊಂಡಿದೆ. ಇಲ್ಲಿನ ಪೀಠಾಧಿಪತಿಗಳು ಎಂದಿಗೂ ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವವನ್ನೆ ತೇಯ್ದಿದ್ದಾರೆ. ನಿಮಗೆ ಸಕಲ ರೀತಿಯ ಸಮಾಧಾನ ನೀಡಲು ಅವರು ಹಗಲಿರುಳು ಯೋಚಿಸಿ ನಿಮಗೆ ಮಾರ್ಗದರ್ಶನ ಮಾಡಿದ್ದಾರೆ. ಜೀವನದಲ್ಲಿ ಇನ್ನಿಲ್ಲದ ಆಸೆಗಳನ್ನು ಪಡುವುದರ ಬದಲಾಗಿ ಇದ್ದುದರಲ್ಲಿಯೇ ಸಮಾಧಾನ ಪಡೆಯಲು ಪ್ರಯತ್ನಿಸಬೇಕು ಎಂದರು.
ಹಿಂದಿನ ಪೀಠಾಧಿಪತಿಗಳೆಲ್ಲರೂ ಶ್ರೀಮಠದ ಉದ್ಧಾರವನ್ನಷ್ಟೇ ಮಾಡದೆ, ಈ ಭಾಗದ ಜನರಿಗೆ ಶಿಕ್ಷಣ, ಅನ್ನ ದಾಸೋಹ ನೀಡಿದ್ದಾರೆ. ಬೆತ್ತದ ಅಜ್ಜನವರು ಮಾಡಿದ ಪವಾಡಗಳನ್ನು ತಿಳಿಯಲು ಬಹಳಷ್ಟು ಸಮಯ ಬೇಕು. ಅವರ ಶೈಕ್ಷಣಿಕ ಕ್ರಾಂತಿ ಎಲ್ಲರಲ್ಲಿಯೂ ಅಕ್ಷರದ ಬೆಳಕನ್ನು ಮೂಡಿಸಿದೆ. ಮೌನಾಚರಣೆಯ ಮೂಲಕ ನೀವು ಅಜ್ಜನವರನ್ನು ಸ್ಮರಿಸಿದರೆ ನಿಮಗೆ ಏನು ಬೇಕೋ ಅದು ಈಡೇರುತ್ತದೆ. ದೇವರು ಮನುಷ್ಯನಿಗೆ ಎಲ್ಲವನ್ನೂ ತಿಳಿದುಕೊಳ್ಳುವ, ಮನಸನ್ನು ನಿಗ್ರಹಿಸಿಕೊಳ್ಳುವ ಶಕ್ತಿ ನೀಡಿದ್ದಾನೆ. ಈ ನಿಗ್ರಹ ಶಕ್ತಿಯನ್ನು ಸದುಪಯೋಗಪಡಿಸಿಕೊಂಡು, ಅನ್ನದಾನೇಶ ಎಲ್ಲವೂ ನೀನೇ ಎಂದು ಸ್ಮರಿಸಿದರೆ ಕಷ್ಟಗಳು ಪರಿಹಾರವಾಗುತ್ತವೆ ಎಂದರು.
ನಾಡಿನ ಅನೇಕ ಹರ-ಗುರು-ಚರ ಮೂರ್ತಿಗಳು, ಮುಖಂಡರಾದ ಮಿಥುನ ಜಿ. ಪಾಟೀಲ, ಸಿದ್ದಣ್ಣ ಬಂಡಿ, ಡಾ. ಬಿ.ವಿ. ಶಿರೂರ ಮತ್ತಿತರರು ಇದ್ದರು. ಲೇಖಕ ಗಿರಿರಾಜ ಹೊಸಮನಿಯವರು ಬರೆದ ಹಾಲಕೆರೆಯ ಐಸಿರಿ ಗ್ರಂಥವೂ ಈ ಸಂದರ್ಭದಲ್ಲಿ ಬಿಡುಗಡೆಯಾಯಿತು. ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ನಿರ್ವಹಿಸಿದರು.