ರಾಜೀನಾಮೆಗೆ ನಿರ್ಧರಿಸಿದ ಸಂಸೆ ಗ್ರಾಪಂ ಸದಸ್ಯರು

8kls1
Published on

ಕಳಸ: ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿಯಲ್ಲಿ ದಿನದಿಂದ ದಿನಕ್ಕೆ ಸಮಸ್ಯೆಗಳು ಬಿಗಾಡಾಯಿಸುತ್ತಿದ್ದು, ಇದನ್ನು ಸರಿಪಡಿಸಬೇಕಾದ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷೃವಹಿಸಿರುವುದರಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವುದು ಹಾಗೂ ಸಾಮಾನ್ಯ ಸಭೆಗೆ ಪಿಡಿಒ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಿಯಿಂದ ಬೇಸತ್ತು ಗ್ರಾಮ ಪಂಚಾಯಿತಿಯ ಐವರು ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಸಂಸೆ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಸಿ.ಮಂಜುನಾಥ್, ಶಮಂತ್, ಪ್ರವೀಣ್, ಶಾಂತರಾಮ್ ಹಾಗೂ ಶಂಕರೇಗೌಡ ಅವರು ತಮ್ಮ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದರೆ ರಾಜಿನಾಮೆ ಪತ್ರವನ್ನು ಅಧ್ಯಕ್ಷರು ತೆಗೆದುಕೊಳ್ಳದ ಹಿನ್ನಲೆಯಲ್ಲಿ ಪಿಡಿಒಗೆ ಕೊಡಲು ತೀರ್ಮಾನಿಸಿದ್ದಾರೆ.

ಸಂಸ್ಥೆ ಗ್ರಾಪಂ ಕಳಸ ತಾಲೂಕಿನಲ್ಲೇ ಅತ್ಯಂತ ದೊಡ್ಡ ಗ್ರಾಮ ಪಂಚಾಯಿತಿಯಾಗಿದೆ. ಈಗಾಗಲೇ ಈ ಪಂಚಾಯಿತಿಯಲ್ಲಿ 1.26 ಕೋಟಿ ರೂ. ಅನುದಾನವಿದ್ದರೂ ಇಲ್ಲಿ ಆಡಳಿತದ ವ್ಯೈತೆಯಿಂದ ಅನುದಾನ ಬಳಕೆ ಮಾಡಿಕೊಳ್ಳದೆ ಜಿಲ್ಲೆಯ 226 ಗ್ರಾಮ ಪಂಚಾಯಿತಿಯಲ್ಲಿ 224ನೇ ಸ್ಥಾನ ಪಡೆದುಕೊಂಡಿದೆ. ನೂರಾರು ಕುಗ್ರಾಮಗಳನ್ನು ಹೊಂದಿರುವ ಈ ಗ್ರಾಪಂ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಸ್‌ಸಿ, ಎಸ್‌ಟಿ ಸಮುದಾಯದ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದು, ಈ ಜನರಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವ ಭರವಸೆ ನೀಡಿ ಮತ ಪಡೆದು ಚುನಾಯಿತರಾದ ಗ್ರಾಪಂ ಸದಸ್ಯರಿಗೆ ಗ್ರಾಪಂ ಅಧಿಕಾರಿಗಳು ಸಹಕಾರ ನೀಡದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಸದಸ್ಯರು ಮುಂದಾಗಿದ್ದಾರೆ.

ನರೇಗಾ ಯೋಜನೆ ಅನುಷ್ಟಾನ, ಜೆಜೆಎಂ ಯೋಜನೆ ಅವ್ಯವಹಾರ ಮತ್ತು ಕಳಪೆ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಸಮಪರ್ಕ ಜಾರಿ ಸಾಧ್ಯವಾಗುತ್ತಿಲ್ಲ. ಕಾಮಗಾರಿಗಳ ಬಿಲ್‌ಪಾವತಿ ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಚರ್ಚೆ ನಡೆಸಲು ಸಾಮಾನ್ಯ ಸಭೆ ನಡೆಸಲು ಅಧಿಕಾರಿಗಳಿಂದ ದಿನಾಂಕ ಪಡೆದು ಸಭೆ ನಿಗದಿಮಾಡಿದ್ದರೂ ಸಭೆಗೆ ಇಒ, ಪಿಡಿಒ ಸೇರಿದಂತೆ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದಾರೆ. ಇದರಿಂದ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ರಾಜೀನಾಮೆ ಪತ್ರದಲ್ಲಿ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net