

-ಹರಿಪ್ರಸಾದ್ ನಂದಳಿಕೆ, ಕಾರ್ಕಳ
ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಗಾಗಿ ಮಣ್ಣು ಅಗೆದ ಪರಿಣಾಮ ಪಶು ಚಿಕಿತ್ಸಾಲಯವೊಂದು ಅಪಾಯದ ಅಂಚಿನಲ್ಲಿದ್ದು, ಕುಸಿಯುವಂತಿದೆ. ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಲ್ಲಿರುವ ಪಶು ಚಿಕಿತ್ಸಾಲಯದ ಬಳಿ ರಸ್ತೆಗಾಗಿ ಸುಮಾರು 15 ಅಡಿಯಷ್ಟು ಮಣ್ಣು ಅಗೆದು ಹಾಕಿದ್ದು, ಪಶು ಚಿಕಿತ್ಸಾಲಯ ಕುಸಿಯುವ ಭೀತಿಯಲ್ಲಿದೆ.
ರಸ್ತೆ ಬದಿಯಲ್ಲಿದ್ದ ಪಶು ಚಿಕಿತ್ಸಾಲಯ ಇಂದೋ ನಾಳೆಯೋ ಕುಸಿಯುವ ಹಂತದಲ್ಲಿದೆ. ಮಳೆಗಾಲ ಆರಂಭವಾಗಿದ್ದು, ಬಿಡದೆ ಸುರಿಯುವ ಮಳೆಗೆ ಮಣ್ಣು ಮತ್ತಷ್ಟು ಕುಸಿದರೆ ಪಶು ಚಿಕಿತ್ಸಾಲಯ ಕುಸಿಯುವ ಭೀತಿಯಿದೆ. ಮಣ್ಣು ಅಗೆದು ಹಾಗೆಯೇ ಬಿಟ್ಟಿದ್ದು ಮಣ್ಣು ಮತ್ತೆ ಕುಸಿಯದಂತೆ ಎಲ್ಲೂ ಪ್ಲಾಸ್ಟರಿಂಗ್ ವ್ಯವಸ್ಥೆಯನ್ನು ಮಾಡಿಲ್ಲ. ಹೀಗಾಗಿ ಹಲವು ವರ್ಷಗಳಿಂದ ಸಾಣೂರು ಗ್ರಾಮದ ಹೈನುಗಾರರಿಗೆ ಪ್ರಯೋಜನಕ್ಕೆ ಬರುತ್ತಿದ್ದ ಪಶು ಚಿಕಿತ್ಸಾಲಯ ಧರೆಗೆ ಉರುಳುವಂತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಮಳೆಗಾಲದಲ್ಲಿ ಮಣ್ಣು ಸವೆದು ಚಿಕಿತ್ಸಾಲಯ ಕುಸಿದರೆ ಭಾರಿ ಅನಾಹುತ ನಡೆಯುವ ಸಾಧ್ಯತೆಯಿದೆ. ಪಶು ಚಿಕಿತ್ಸಾಲಯದ ಪಕ್ಕದಲ್ಲೇ ಹೈಟೆನ್ಶನ್ ತಂತಿಯ ಟವರ್ ಕೂಡ ಇದ್ದು, ಗುಡ್ಡ ಕುಸಿದರೆ ಹೈಟೆನ್ಶನ್ ವಯರ್ ಧರಶಾಯಿಯಾಗಿ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗಲಿದೆ.ಅನಾಹುತವಾಗುವ ಮೊದಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪಶು ಚಿಕಿತ್ಸಾಲಯದ ಬಳಿ ಮಣ್ಣು ಅಗೆದ ಪ್ರದೇಶದಲ್ಲಿ ಪ್ಲಾಸ್ಟರಿಂಗ್ ಅಥವಾ ತಡೆಗೋಡೆಯನ್ನು ನಿರ್ಮಿಸುವ ಮೂಲಕ ಮುಂದೆ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬಹುದಾಗಿದೆ. ಆದರೆ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಇದೀಗ ಕಾಟಾಚಾರಕ್ಕೆ ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಿ ಕೈ ತೊಳೆದುಕೊಂಡಿದ್ದಾರೆ. ತಡೆಗೋಡೆ ನಿರ್ಮಾಣವಾಗದಿದ್ದರೆ ಈ ಬಾರಿಯ ಮಳೆಗಾಲಕ್ಕೆ ಚಿಕಿತ್ಸಾಲಯ ಕುಸಿದು ಬೀಳುವುದು ಮಾತ್ರ ಖಚಿತ ಎನ್ನುತ್ತಿದ್ದಾರೆ ಜನ.
ಇಲ್ಲಿನ ಚಿಕಿತ್ಸಾಲಯ ಕುಸಿಯುವ ಮಟ್ಟ ತಲುಪಿದ ಬಗ್ಗೆ ಈಗಾಗಲೇ ಸ್ಥಳೀಯರು ಹಾಗೂ ಸಾಮಾಜಿಕ ಹೋರಾಟಗಾರರು ಸಂಬಂದಿಸಿದ ಇಲಾಖೆಗಳಿಗೆ ಮೌಖಿಕವಾಗಿ ದೂರನ್ನು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವೊಂದು ಕಡೆಗಳ ರಸ್ತೆ ವಿಸ್ತರಣೆಗಾಗಿ ವಿದ್ಯುತ್ ಕಂಬಗಳ ಬುಡವನ್ನು ಅಗೆದು ಹಾಕಿದ್ದು ಇಂದೋ ನಾಳೆಯೋ ಧರೆಗೆ ಉರುಳುವಂತಿದೆ. ಮುಂದೆ ವಿದ್ಯುತ್ ಕಂಬ ಹಾಗೂ ಪಶು ಚಿಕಿತ್ಸಾಲಯಗಳು ಮಳೆಗಾಲದಲ್ಲಿ ಕುಸಿದು ಅನಾಹುತ ಸೃಷ್ಟಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾಣೂರು ಯುವಕ ಮಂಡಲ, ಸಾಣೂರು ಗ್ರಾಮ ಪಂಚಾಯತ್ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಗುತ್ತಿಗೆದಾರ ಸಂಸ್ಥೆ ಮ್ಯಾನೇಜರ್ ಮತ್ತು ಹೆದ್ದಾರಿ ಇಂಜಿನಿಯರ್ ಗಮನಕ್ಕೆ ತಂದರೂ ಕೂಡ ಯಾವುದೇ ಸುರಕ್ಷತಾ ಕ್ರಮಗಳನ್ನು ಈವರೆಗೆ ಕೈಗೊಂಡಿಲ್ಲ.
ರಸ್ತೆಯ ನಿರ್ಮಾಣದ ವೇಳೆ ಎಲ್ಲೂ ಕೂಡ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಪಶು ಚಿಕಿತ್ಸಾಲಯದ ಬಳಿ 15 ಅಡಿಗಳಷ್ಟು ಅಗೆದು ಹಾಕಿ ಸುಮ್ಮನಾಗಿದ್ದಾರೆ. ಮಳೆಗಾಲದಲ್ಲಿ ದೊಡ್ಡ ಅನಾಹುತ ಸೃಷ್ಟಿಯಾಗುವ ಮುನ್ನ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಪರಿಸರದ ಜನತೆ ಬೀದಿಗಳಿದು ಪ್ರತಿಭಟಿಸಬೇಕಾದೀತು.-ಸಾಣೂರು ನರಸಿಂಹ ಕಾಮತ್, ಹೆದ್ದಾರಿ ಹೋರಾಟ ಸಮಿತಿ ಸದಸ್ಯ
ಸುಮಾರು 15 ಅಡಿಯಷ್ಟು ಅಗೆದು ಹಾಕಿ ತಡೆಗೋಡೆಯನ್ನು ನಿರ್ಮಿಸದೆ ಬೇಜಬ್ದಾರಿ ತೋರುತ್ತಿದೆ. ಮಣ್ಣು ಕುಸಿದರೆ ಪಶು ಚಿಕಿತ್ಸಾಲಯ ಧರೆಗೆ ಉರುಳುವ ಸಾಧ್ಯತೆಯಿದೆ. ಸಮೀಪದಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ಇದ್ದು ಅನಾಹುತ ನಡೆಯುವ ಮುನ್ನ ಸಂಬಂಧಿಸಿದವರು ಎಚ್ಚೆತ್ತುಕೊಳ್ಳಬೇಕಾಗಿದೆ. -ಸಂಪತ್, ಗ್ರಾಮಸ್ಥ