ಇನ್ನೂ ಸಿಗದ ಸಾಮಾಜಿಕ ಸಮಾನತೆ: ಬುದ್ಧ ವಿಹಾರದ ಡಾ.ಕಲ್ಯಾಣ ಸಿರಿ ಬಂತೇಜಿ ವಿಷಾದ

Sanmana
Published on
ಮಂಡ್ಯ: ದೇಶದಲ್ಲಿ ಪ್ರಜಾಪ್ರಭುತ್ವ ಜಾರಿಯಲ್ಲಿದ್ದರೂ ಶೋಷಿತರಿಗೆ ರಾಜಕೀಯ ಸ್ಥಾನಮಾನ ದೊರೆತಿದೆಯೇ ಹೊರತು ಧಾರ್ಮಿಕ ಹಾಗೂ ಸಾಮಾಜಿಕವಾಗಿ ಸಮಾನತೆ ಸಿಕ್ಕಿಲ್ಲ ಎಂದು ಮೈಸೂರಿನ ವಿಶ್ವ ಮೈತ್ರಿ ಬುದ್ಧ ವಿಹಾರದ ಡಾ.ಕಲ್ಯಾಣ ಸಿರಿ ಬಂತೇಜಿ ವಿಷಾಧ ವ್ಯಕ್ತಪಡಿಸಿದರು.
ಇಲ್ಲಿನ ಸುಭಾಷ್‌ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬುದ್ದಯಾನದಿಂದ ಆಯೋಜಿಸಿದ್ದ ಹಿರಿಯ ಸಾಹಿತಿ ಎಂ.ಎಸ್.ಪರಶಿವಮೂರ್ತಿ ಅವರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಮೇಲು-ಕೀಳು, ಜಾತಿ ಪದ್ಧತಿ, ಅಸ್ಪಶ್ಯತೆ, ಶೋಷಣೆ, ಅನಿಷ್ಟ ಪದ್ಧತಿಗಳು ಶೋಷಿತ ಜನರ ಬದುಕಿಗೆ ಕಂಟಕವಾಗಿವೆ. ಸಂವಿಧಾನ ಸಮಾನತೆಯ ಬದುಕಿಗೆ ಅವಕಾಶ ಕಲ್ಪಿಸಿದ್ದರೂ ಸಹ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಪರಿವರ್ತನೆಯ ಮನಸ್ಥಿತಿ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಆರಾಧಿಸುವವರ ಸಂಖ್ಯೆ ಹೆಚ್ಚಾಗಿದೆ. ಅನುಸರಿಸುವವರು ಕಡಿಮೆ ಜನ, ನಿಜವಾಗಿಯೂ ಅನುಸರಿಸುವವರ ಸಂಖ್ಯೆ ಹೆಚ್ಚಾಗಬೇಕಾಗಿದೆ. ಆಗಲೇ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಅಂಬೇಡ್ಕರ್, ಬುದ್ಧನ ತತ್ವವನ್ನು ಪಾಲಿಸುವ ಮೂಲಕ ಪರಿಶಿಷ್ಟ ಸಮುದಾಯದ ಜನತೆ ಜಾಗೃತರಾಗಬೇಕು. ಬೌದ್ಧ ಧರ್ಮ ದೇಶದಲ್ಲಿನ ಪ್ರಜಾಸತಾತ್ಮಕ ಚಳವಳಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಗಟ್ಟಿದನಿಯಾಗಿದೆ. ಬುದ್ಧನಿಲ್ಲದೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನರ ಪ್ರತಿ ಸಮಸ್ಯೆಗೂ ಬೌದ್ಧಧರ್ಮದಲ್ಲಿ ಪರಿಹಾರ ಮಾರ್ಗ ಇದೆ. ಬುದ್ಧನ ತತ್ವಗಳನ್ನು ಅರಿಯಬೇಕಾಗಿದೆ ಎಂದು ತಿಳಿಸಿದರು.
ನಿವೃತ್ತ ಪ್ರಧಾನ ಇಂಜಿನಿಯರ್ ಎಂ.ಬಿ.ಜಯಶಂಕರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಡಾ.ಮಹದೇವ್, ಡಾ.ಪಶುಪತಿ, ಎಂ.ಸಿ.ಬಾಲಕೃಷ್ಣ, ನಗರಸಭೆ ಸದಸ್ಯ ಎಂ.ಸಿ.ಶಿವಪ್ರಕಾಶ್, ಎಂ.ಎಸ್.ಮೂರ್ತಿ, ಎಂ.ಪಿ.ಶಿವರಾಮಮೂರ್ತಿ, ಎಂ.ಬಿ.ಶಿವಶಂಕರ್ ಇತರರಿದ್ದರು.
ಇದೇ ವೇಳೆ ಹಿರಿಯ ಸಾಹಿತಿ ಎಂ.ಎಸ್.ಪರಶಿವಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂತೆಯೇ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net