ನೋವನ್ನು ನಲಿವಾಗಿ ಪರಿವರ್ತಿಸಿಕೊಳ್ಳಿ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು

San
Published on

ಮಂಡ್ಯ: ಮನುಷ್ಯನ ಹುಟ್ಟು ಮತ್ತು ಸಾವಿನ ನಡುವೆ ನೋವು, ನಲಿವು ಸಹಜ. ಆದರೆ ನೋವನ್ನು ನಲಿವಾಗಿ ಪರಿವರ್ತಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ನಗರದ ಕರ್ನಾಟಕ ಸಂಘದ ಕುವೆಂಪು ಬಯಲು ರಂಗಮಂದಿರದಲ್ಲಿ ಪಟೇಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ವೀರ ಸೈನಿಕ ದಿವಂಗತ ಆರ್.ಲೋಕೇಶ್ ಪಟೇಲ್ ಜ್ಞಾಪಕಾರ್ಥ ಆಯೋಜಿಸಿದ್ದ ಸನ್ಮಾನ ಹಾಗೂ ವಿದ್ಯಾರ್ಥಿ ಪುರಸ್ಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಜೀವನದಲ್ಲಿ ಎದುರಾಗುವ ನೋವನ್ನು ಅನುಭವಿಸುತ್ತಾ ಕುಳಿತರೆ ಅದರ ತೀವ್ರತೆ ಹೆಚ್ಚಾಗುತ್ತದೆ. ರಾಜಶೇಖರ್ ದಂಪತಿ ತಮ್ಮ ಮಗನ ಸಾವಿನ ನೋವನ್ನು ಸಮಾಜ ಸೇವಾ ಕಾರ್ಯ ಮಾಡುವ ಮೂಲಕ ಮರೆಯುತ್ತಾ ಮಾದರಿಯಾಗಿದ್ದಾರೆ. ಇಂತಹ ಸಂದೇಶಗಳು ಹೃದಯ ಮತ್ತು ಮನಸ್ಸಿಗೆ ಕೊಡುವ ಶಕ್ತಿ ಅಪಾರ. ಶಕ್ತಿಗೆ ಸಾವು ಇಲ್ಲ ಮತ್ತು ಸೃಷ್ಟಿಸಲು ಸಾಧ್ಯವಿಲ್ಲ. ಅದು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತನೆ ಆಗುತ್ತದೆ. ಅದೇ ರೀತಿ ಸಾವಿನ ನಂತರದ ಆತ್ಮ ಇನ್ನೊಂದು ರೂಪದಲ್ಲಿ ಬದಲಾಗುತ್ತದೆ ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಲೋಕೇಶ್ ಅವರು ಎಲ್ಲರಿಗೂ ಸ್ಫೂರ್ತಿ. ಮನಸ್ಸಿಗಾದ ಘಾಸಿಯನ್ನು ಮರೆತು ಸಮಾಜದ ಸಾಧಕರು ಮತ್ತು ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವುದು ನಿಜವಾದ ಸೇವೆ. ಅದರಲ್ಲಿ ಸಮಾಜದ ಹಿತ ಇರುತ್ತದೆ. ಟ್ರಸ್ಟ್ ಮೂಲಕ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವ ಸಂಕಲ್ಪ ಇಟ್ಟುಕೊಂಡು ಮಾಡುತ್ತಿರುವುದು ಅಭಿನಂದನೀಯ. ಇದು ಬೇರೆಯವರಿಗೂ ಪ್ರೇರಣೆಯಾಗುತ್ತದೆ ಎಂದು ಪ್ರಶಂಸಿಸಿದರು.

ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ವ್ಯಕ್ತಿತ್ವ ಎಂಬುದು ಮನುಷ್ಯನಿಗೆ ಮಾತ್ರ ಸೀಮಿತವಾದುದಲ್ಲ. ನಡವಳಿಕೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಜಿಲ್ಲೆಯ ವ್ಯಕ್ತಿತ್ವ ನಿರ್ಮಾಣವಾಗಲು ಇಲ್ಲಿನ ವ್ಯಕ್ತಿಗಳು, ಸಂಘ-ಸಂಸ್ಥೆಗಳ ಜತೆಗೆ ಇಲ್ಲಿ ಏನೇನಿದೆಯೋ ಎಲ್ಲವೂ ಕಾರಣ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್ಪಿ ಎನ್.ಯತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ಎಂ.ಶ್ರೀನಿವಾಸ್, ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ, ಪಟೇಲ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷೆ ನಾಗಮ್ಮ, ಸಂಸ್ಥಾಪಕ ಜೆ.ರಾಜಶೇಖರಯ್ಯ, ಮಿಮ್ಸ್ ಪಿಆರ್‌ಒ ಉಮೇಶ್, ಕೋಣನಹಳ್ಳಿ ಜಯರಾಮು, ಸಿದ್ದರಾಜು, ಎಂ.ಯು.ಶ್ವೇತಾ, ಕೆಂಪಮ್ಮ ಇತರರಿದ್ದರು.

ಸನ್ಮಾನ, ಪುರಸ್ಕಾರ: ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಶಶಿಧರ್ ಬಸವರಾಜು, ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಸ್.ಯೋಗೇಶ್, ನಿವೃತ್ತ ಸೈನಿಕ ಎಚ್.ಡಿ.ಹರೀಶ್‌ಕುಮಾರ್ ಹಾಗೂ ದೊಡ್ಡಗರುಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ.ಬಿ.ಶಿವರಾಮು ಅವರನ್ನು ಸನ್ಮಾನಿಸಲಾಯಿತು. ಮಂಡ್ಯ ತಾಲೂಕಿನ ಬಿದರಕಟ್ಟೆ ಪ್ರಗತಿಪರ ರೈತ ರವಿಕುಮಾರ್ ಅವರಿಗೆ 5 ಸಾವಿರ ರೂ. ಗೌರವಧನದೊಂದಿಗೆ ಕೃಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೈದ್ಯಕೀಯ ವಿದ್ಯಾರ್ಥಿ ಸ್ವರೂಪ್, ಕೃಷಿ ವಿಜ್ಞಾನ ವಿದ್ಯಾರ್ಥಿ ರೋಹಿತ್, ಇಂಜಿನಿಯರಿಂಗ್ ವಿದ್ಯಾರ್ಥಿ ಎನ್.ಡಿ.ರಂಜಿತಾ ಹಾಗೂ ದಂತ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಡಿ.ಎಸ್.ರಾಹುಲ್ ಅವರಿಗೆ ತಲಾ 20 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ದೊಡ್ಡಗರುಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಡಿ.ಎಸ್.ಅಶ್ವಥಿ, ಬಸರಾಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಪಿಯುಸಿ ವಿಜ್ಞಾನ ವಿಭಾಗದ ಡಿ.ಸಿ.ಸುಮಿತ್ರಾ, ವಾಣಿಜ್ಯ ವಿಭಾಗದ ಡಿ.ಎಸ್.ರಕ್ಷಿತಾ ಹಾಗೂ ಕಲಾ ವಿಭಾಗದ ಡಿ.ಆರ್.ಅಶ್ವಿನಿ ಅವರಿಗೆ ತಲಾ 5 ಸಾವಿರ ರೂ. ನಗದು ನೀಡಿ ಪುರಸ್ಕರಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಚ್.ಕೆ.ಪ್ರೀತಿ, ಡಿ.ಮಂಜುನಾಥ್, ಎಂ.ಪೂರ್ವಿಕಾ ಅವರಿಗೆ ಬಹುಮಾನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net