

ತಿಪಟೂರು : ಹಣಕ್ಕಾಗಿ ಮತ ಮಾರಿಕೊಂಡು ನಿಮ್ಮತನ ಕಳೆದುಕೊಳ್ಳಬೇಡಿ, ನಾಯಕನ ಹಿಂದೆ ಹೋಗುವ ಮುಂಚೆ ನಾಯಕನ ಉದ್ದೇಶ ತಿಳಿಯಿರಿ ಎಂದು ನಟ ಸತೀಶ್ ನೀನಾಸಂ ಹೇಳಿದರು.
ನಗರದ ರೋಟರಿ ಭವನದಲ್ಲಿ ಟೂಡಾ ಶಶಿಧರ್ ಬಳಗದ ಜನಸ್ಪಂದನ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಕರೊನಾ ಸೇನಾನಿಗಳಿಗೆ ಪ್ರಶಂಸಾ ಪತ್ರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ನಾಯಕನ ಹಿಂದೆ ಹೋಗುವುದಕ್ಕೂ ಮುಂಚೆ, ಕಾಸಿಗೆ ಕೈವೊಡ್ಡಿ ಆತನಿಗೆ ಜೈಕಾರ ಹಾಕುವುದಕ್ಕೂ ಮುಂಚೆ ನಾಯಕನ ಉದ್ದೇಶ ತಿಳಿದುಕೊಳ್ಳಿ. ಇಲ್ಲವಾದಲ್ಲಿ ನೀವು ಮಾಡಿದ ಪಾಪ ಪ್ರಜ್ಞೆಯನ್ನು ನಿಮ್ಮ ಮಕ್ಕಳು ಅನುಭವಿಸುವಂತಾಗುತ್ತದೆ. ಇರುವ ಜನ್ಮವನ್ನು ಶ್ರೇಷ್ಠತೆಯಿಂದ ಅಳೆಯುವ ಬದಲು ಮಾನವೀಯತೆಯಿಂದ ಅಳೆಯಿರಿ. ಹಿಂಸೆಯಿಂದ ಯಾವುದೇ ಹೋರಾಟ ಕಟ್ಟಲು ಹೋಗದಿರಿ. ಇರುವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಿ ಎಂದರು.
ಕರೊನಾ ಸಂದರ್ಭ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಲು ಎಲ್ಲರಿಗಿಂತ ಮುಂಚೂಣಿ ಪಾತ್ರ ವಹಿಸಿದ ಮುಸ್ಲಿಂಮರು ಮತ್ತು ಸೋಂಕಿತರ ಜೀವ ಉಳಿಸಲು ನೆರವಾದ ಆರೋಗ್ಯ ಇಲಾಖೆ ಸಿಬ್ಬಂದಿ, ಆಂಬುಲೆನ್ಸ್ ಚಾಲಕರು ಹಾಗೂ ಇತರ ಇಲಾಖೆಯ ಸಿಬ್ಬಂದಿ ಸೇರಿ 150ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಿ ಪ್ರಶಂಸನಾ ಪತ್ರ ನೀಡುತ್ತಿರುವುದು ರಾಜ್ಯಕ್ಕೆ ಮಾದರಿಯಾಗುವ ಕಾರ್ಯಕ್ರಮವಾಗಿದೆ ಎಂದರು. ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಟೂಡ ಶಶಿಧರ್ ಮಾತನಾಡಿ, ಕರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದಲ್ಲಿ ಮುಸ್ಲಿಂಮರನ್ನು ಸ್ಮರಿಸಿ, ಗೌರವಿಸುವುದು ಹೆಮ್ಮೆಯ ವಿಷಯ. ಮನುಷ್ಯತ್ವದ ಕಡೆಗೆ ಹೆಜ್ಜೆ ನಮ್ಮ ಟ್ರಸ್ಟ್‌ನ ಅಭಿಲಾಷೆ ಎಂದರು. ಕುಪ್ಪಾಳು ರಂಗಸ್ವಾಮಿ, ಮುತುವಲ್ಲಿ ಸೈಫುಲ್ಲಾ ಶರೀಫ್, ಎಂ.ಬಿ.ಪರಮಶಿವಯ್ಯ, ರೋಟರಿ ಅಧ್ಯಕ್ಷ ಅಶೋಕ್, ಬಸವರಾಜು, ಗೌತಮ್, ಕೆಳಹಟ್ಟಿಸತೀಶ್, ಮನೋಹರ್ ಪಟೇಲ್ ಇತರರು ಇದ್ದರು.
ಸೇವೆ ಮತ್ತು ಸಹಾಯ ಸಾಧನೆಗೆ ಮೀರಿದ್ದು, ಸಾಧನೆ ಒಬ್ಬರದ್ದಾರೆ, ಸಹಾಯ ಹಲವರದ್ದಾಗುತ್ತೆ. ಕಣ್ಣಿಗೆ ಕಾಣದ ಕರೊನಾ ವೈರಿಯ ವಿರುದ್ಧ ಹೋರಾಡಿದ ಯೋಧರು ರಾಜರಿಗೆ ಸಮಾನ. ಇಂತಹವರಿಗೆ ಬೆಳ್ಳಿ ಪದಕವುಳ್ಳ ಪ್ರಶಂಸಾ ಪತ್ರ ನೀಡಿ ಗೌರವಿಸುತ್ತಿರುವುದು ಯೋಧರಿಗೆ ಜೀವಮಾನ ಪ್ರಶಸ್ತಿ ನೀಡಿದಂತೆ. ಮಾಸ್ತಿ, ಸಿನಿಮಾ ಸಂಭಾಷಣಾಗಾರ ಕರೊನಾ ಮೂರನೇ ಅಲೆ ಶೀಘ್ರದಲ್ಲಿ ಅಪ್ಪಳಿಸಲಿದೆ. ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಲ್ಲೂ ಸುಳಿವು ಸಿಗುತ್ತಿಲ್ಲ. ಲಸಿಕೆ ಪಡೆಯುವುದರಿಂದ ಮಾತ್ರ ಇದರಿಂದ ಬಚಾವಾಗಲು ಸಾಧ್ಯ. ಗರ್ಭಿಣಿ, ಮತ್ತು ಬಾಣಂತಿಯರು ತಪ್ಪದೇ ಎರಡು ಡೋಸ್ ಲಸಿಕೆ ಪಡೆಯಬೇಕು. ಡಾ.ಸುಧಾ, ಕರೊನಾ ನೋಡಲ್ ಅಧಿಕಾರಿ, ಜಯನಗರ ಸರ್ಕಾರಿ ಆಸ್ಪತ್ರೆ ಬೆಂಗಳೂರು