ಮಕ್ಕಳನ್ನು ಉತ್ತೇಜಿಸಲು ಪ್ರತಿಭಾ ಪುರಸ್ಕಾರ ಸಹಕಾರಿ

sanmana
Published on

ಕುಶಾಲನಗರ:

ಶಿಕ್ಷಣ ಎಂಬುದು ಎಂದಿಗೂ ಅಳಿಸಲಾಗದಂತಹ ಶಕ್ತಿಯಾಗಿದ್ದು ಮಕ್ಕಳನ್ನು ಉತ್ತೇಜಿಸಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಕುಶಾಲನಗರ ಸಂತ ಸೆಬಾಸ್ಟಿಯನ್ ದೇವಾಲಯ ಧರ್ಮಗುರು ಫಾ.ಮಾರ್ಟಿನ್ ಹೇಳಿದರು. ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘ ಕುಶಾಲನಗರ ಘಟಕದ ಆಶ್ರಯದಲ್ಲಿ ಮುಳ್ಳುಸೋಗೆ ತಪೋವನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಿಲ್ಲಾ ಕ್ರೈಸ್ತ ಸೇವಾ ಸಂಘದ ವತಿಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂಥ ಕಾರ್ಯಕ್ರಮವನ್ನು ಮುಂದುವರೆಸಿಕೊAಡು ಹೋಗುವ ಮೂಲಕ ಸನ್ಮಾನ ಸ್ವೀಕರಿಸಿದ ಮಕ್ಕಳು ಭವಿಷ್ಯದಲ್ಲಿ ಇತರರಿಗೆ ಮಾದರಿ ಹಾಗೂ ಮಾರ್ಗದರ್ಶಕರಾಗಬೇಕು ಎಂದರು.

ತಪೋವನದ ಫಾ.ವಿಲ್ಫ್ರೆಡ್ ಫ್ರಾಂಕ್ ಮಾತನಾಡಿ, ಅಗತ್ಯವಿದ್ದವರು ಹಾಗೂ ದುರ್ಬಲರಿಗೆ ಸಹಾಯ ಹಸ್ತ ಚಾಚಬೇಕಿದೆ. ಜಗತ್ತಿನಲ್ಲಿ ಅವಶ್ಯಕತೆಗಳು ಹೆಚ್ಚಾಗಿರುವ ಕಾರಣ ಕೈಚಾಚಿ ದಾನ ಮಾಡುವ ಬದಲು ಮನಸ್ಸು ಪೂರ್ತಿಯಾಗಿ ನೆರವು ನೀಡಬೇಕಿದೆ ಎಂದು ಹೇಳಿದರು.

ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಇಂದಿನ ಕಾಲದಲ್ಲಿ ಇತರರ ಬಗ್ಗೆ ಕಾಳಜಿ ವಹಿಸುವ ಮನೋಭಾವ ಕ್ಷೀಣಿಸುತ್ತಿದೆ. ನೆರೆಹೊರೆಯವರಿಗೆ ನೆರವಾಗುವ ಮನಸ್ಥಿತಿ ಎಲ್ಲರೂ ಬೆಳೆಸಿಕೊಳ್ಳಬೇಕಿದೆ. ಬೇರೆ ಧರ್ಮ, ಸಮುದಾಯಗಳನ್ನು ಕೀಳಾಗಿ ಕಾಣದೆ ತಮ್ಮ ಸಮುದಾಯದ ಉನ್ನತಿಗೆ, ಪ್ರತಿಭಾವಂತರು, ಸಾಧಕರನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ಎಲ್ಲರೂ ಒಗ್ಗೂಡಬೇಕಿದೆ ಎಂದರು.

ಕುಶಾಲನಗರ ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಎನ್.ಟಿ. ಜೋಸೆಫ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯದ ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯ ಹಾಗೂ ಜವಬ್ದಾರಿ ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಸಮುದಾಯದ 16 ವಿದ್ಯಾರ್ಥಿಗಳು ಸೇರಿದಂತೆ ಸಾಧಕರು, ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಫಾತಿಮಾ ಕಾನ್ವೆಂಟ್‌ನ ಸಿ. ಅಗ್ನಿಸ್ ಸುಪೀರಿಯರ್, ಸಿ. ಪ್ಲೋರೆಟ್, ತಪೋವನದ ಫಾ. ಲಾರೆನ್ಸ್, ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ವಿ.ಎಸ್. ಸಜಿ, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ, ಕುಶಾಲನಗರ ಕ್ರೈಸ್ತ ಸೇವಾ ಸಂಘದ ಉಪಾಧ್ಯಕ್ಷ ಟಿ.ಎಸ್. ಪ್ಯಾಟ್ರಿಕ್, ಕಾರ್ಯದರ್ಶಿ ಸೆಲೀನಾ ಡಿ ಕುನ್ನ, ಸಹ ಕಾರ್ಯದರ್ಶಿ ಜೇಮ್ಸ್ ಡಿಸೋಜ, ಖಜಾಂಚಿ ಆಲ್ಬರ್ಟ್ ಗೋನ್ಸಲ್ವೇಸ್ ಮತ್ತಿತರರು ಇದ್ದರು. ಇದೇ ಸಂದರ್ಭ ಆರ್ಯ ನಡೆಸಿಕೊಟ್ಟ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net