

ತುಮಕೂರು : ಮಹಿಳಾ ನೌಕರರು ಮಕ್ಕಳ ಪಾಲನೆಗಾಗಿ ವರ್ಷದಲ್ಲಿ 180 ದಿನಗಳ ಶಿಶುಪಾಲನೆ ರಜೆ ಪಡೆಯಬಹುದಾಗಿದ್ದು, ಈ ರಜೆಯನ್ನು ವಿವೇಚನೆಯಿಂದ ಬಳಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರಲ್ಲಿ ಶೇ.60 ಮಹಿಳಾ ನೌಕರರಿದ್ದು, ಅನಗತ್ಯವಾಗಿ ರಜೆ ಹಾಕಿ, ಕೆಲಸದಲ್ಲಿ ಏರುಪೇರಾದರೆ, ಈ ಸೌಲಭ್ಯವನ್ನು ಸರ್ಕಾರ ಹಿಂಪಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಸರ್ಕಾರಿ ನೌಕರರ ಸಂಘದ ಇತಿಹಾಸದಲ್ಲಿಯೇ ಹೋರಾಟವಿಲ್ಲದೆ ನೌಕರರ ತುಟ್ಟಿಭತ್ಯೆ, ಶಿಶುಪಾಲನೆ ರಜೆ ಸೇರಿ ಇನ್ನಿತರ ಸೌಲಭ್ಯಗಳನ್ನು ಪಡೆದಿರುವುದು ಇದೇ ಮೊದಲು. ಪ್ರಸ್ತುತ ರಾಜ್ಯ ಸರ್ಕಾರವು ನೌಕರರ ಪರವಾಗಿದೆ. ಕೇಂದ್ರ ಸರ್ಕಾರವು ನೌಕರರಿಗೆ ತುಟ್ಟಿ ಭತ್ಯೆ ಘೋಷಿಸಿದ ಕೇವಲ ಒಂದು ಗಂಟೆಯಲ್ಲಿಯೇ ರಾಜ್ಯ ಸರ್ಕಾರದ ನೌಕರರಿಗೂ ತುಟ್ಟಿಭತ್ಯೆಯನ್ನು ಅಂದು ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಪ್ರಕಟಿಸಿದ್ದರು ಎಂದು ಶ್ಲಾಘಿಸಿದರು.
ಸರ್ಕಾರಿ ನೌಕರರ ಮಕ್ಕಳು, ಪ್ರತಿಭಾವಂತರಾಗಿ, ತಮ್ಮ ಕಾಲಮೇಲೆ ನಿಂತು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬೇಕು. ನಮ್ಮಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ. ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದರೆ ತುಮಕೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೇ.95ಕ್ಕಿಂತಲೂ ಹೆಚ್ಚು ಅಂಕ ಪಡೆದ ನೌಕರರ ಮಕ್ಕಳಿರುವುದು ಸಂತೋಷದ ವಿಚಾರ. ಇದೇ ಸಾಧನೆಯನ್ನು ಮುಂದಿನ ಶೈಕ್ಷಣಿಕ ತರಗತಿಗಳಲ್ಲಿಯೂ ಮಾಡಿ, ಸರ್ಕಾರಿ, ಖಾಸಗಿ ಕ್ಷೇತ್ರದಲ್ಲಿ ನೌಕರಿಯ ಜತೆಗೆ, ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿದ ಅರ್ಥಿಕವಾಗಿ ಸಬಲರಾಗುವ ಮೂಲಕ ಪೋಷಕರಿಗೆ ಹೆಸರು ತರುವಂತೆ ತಿಳಿಸಿದರು.
ಜನರು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ಸರ್ಕಾರಿ ನೌಕರರು ಕಾರ್ಯನಿರ್ವಹಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಹೆಚ್ಚಿನ ಅನುಕೂಲವಾಗಿದೆ. ಅವರ ಎಲ್ಲ ಬೇಡಿಕೆಗಳನ್ನು ಯಾವುದೇ ಪ್ರತಿಭಟನೆಯಿಲ್ಲದೆ ಈಡೇರಿಸಲಾಗಿದೆ. ಜನರನ್ನು ಕಚೇರಿಗಳಿಗೆ ಅಲೆಸದೆ ಅವರ ಕೆಲಸವನ್ನು ಮಾಡಿಕೊಡುವ ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು ಎಂದರು.
ಸರ್ಕಾರ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಎಚ್.ವಿ.ವೆಂಕಟೇಶಯ್ಯ, ಡಾ.ಕಿರಣ್, ಆರ್.ಪರಶಿವಮೂರ್ತಿ, ಎಚ್.ಇ.ರಮೇಶ್, ಜಿ.ಪಿ.ಪರಮೇಶ್, ಜಿ.ಆರ್.ವೆಂಕಟೇಶಯ್ಯ, ಎಚ್.ಎಂ.ರುದ್ರೇಶ್, ಬಿ.ಎಂ.ಲಕ್ಷ್ಮೀಶ್, ಕೆ.ವಿ.ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಯಿತು.
ಮೀಸಲು ನೀಡಿ : ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ವತಿಯಿಂದ ಶಿಕ್ಷಕರ ಸಂಘದಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಿರುವ ರೀತಿಯಲ್ಲಿ ಸರ್ಕಾರಿ ನೌಕರರ ಸಂಘದಲ್ಲಿಯೂ ಮಹಿಳೆಯರಿಗೆ ಶೇ.33 ಸ್ಥಾನಮಾನವನ್ನು ಪದಾಧಿಕಾರಿಗಳು ಹಾಗೂ ನಿರ್ದೇಶಕರ ಹುದ್ದೆಗಳಲ್ಲಿ ನೀಡುವಂತೆ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರಿಗೆ ಮನವಿ ಸಲ್ಲಿಸಲಾಯಿತು.