

ಚಾಮರಾಜನಗರ: ವರ್ಷದ ಮೊದಲ ಹಬ್ಬವಾಗಿರುವ ಸಂಕ್ರಾಂತಿಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲು ಜಿಲ್ಲೆಯ ಜನ ಸಿದ್ಧತೆ ಮಾಡಿಕೊಂಡಿದ್ದಾರೆ.
ಚಾಮರಾಜನಗರ, ಹನೂರು, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ತಾಲೂಕು ಕೇಂದ್ರಗಳ ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಗ್ರಿ ಖರೀದಿ ಜೋರಾಗಿತ್ತು. ಕಳೆದ ವರ್ಷ ಕರೊನಾ ಹಿನ್ನೆಲೆಯಲ್ಲಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ವಿಧಿಸಿದ್ದರಿಂದ ಜನರು ಸಂಭ್ರಮದಿಂದ ಹಬ್ಬ ಮಾಡಲು ಆಗಿರಲಿಲ್ಲ. ಈ ಸಲ ಈ ನಿಬಂಧನೆಗಳು ಇಲ್ಲದೆ ಇರುವುದರಿಂದ ಶನಿವಾರ ಬೆಳಗ್ಗೆಯಿಂದಲೇ ಮಾರುಕಟ್ಟೆಗಳಲ್ಲಿ ವ್ಯಾಪಾರ ಜೋರಾಗಿತ್ತು. ಎಳ್ಳು, ಬೆಲ್ಲ, ಕಬ್ಬು, ಸಕ್ಕರೆ ಅಚ್ಚು, ಹೂ, ಹಣ್ಣು, ಕಬ್ಬು, ತರಕಾರಿ ಖರೀದಿಯಲ್ಲಿ ಜನರು ತೊಡಗಿದ್ದರು. ಬಟ್ಟೆ ವ್ಯಾಪಾರ ಬಿರುಸಿನಿಂದ ಕೂಡಿತ್ತು. ಹಳ್ಳಿಗಳಲ್ಲಿ ರೈತರು ಎತ್ತುಗಳನ್ನು ತೊಳೆದು ಅವುಗಳ ಕೊಂಬಿಗೆ ಬಣ್ಣ ಬಳಿದು ಕಿಚ್ಚು ಹಾಯಿಸಲು ಸಿದ್ಧತೆ ಮಾಡಿಕೊಂಡರು. ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ದೇಗುಲಗಳಲ್ಲಿ ವಿಶೇಷ ಪೂಜೆ ಮಾಡಲು ತಯಾರಿ ನಡೆಯಿತು.
ಗೋಪಿನಾಥಂನಲ್ಲಿ ಹಬ್ಬ ಜೋರು: ಹನೂರು ತಾಲೂಕಿನ ಗಡಿಭಾಗದ ಗೋಪಿನಾಥಂನಲ್ಲಿ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಗೋಪಿನಾಥಂ, ಪುದೂರು, ಆತ್ತೂರು, ಕೋಟೆಯೂರು, ಮಾರುಕೊಟ್ಟಾಯ್ ಹಾಗೂ ಆಲಂಬಡಿಯಲ್ಲಿ ಪೊಂಗಲ್ (ಸಂಕ್ರಾಂತಿ) ಹಬ್ಬವನ್ನು ಭೋಗಿ, ಸೂರ್ಯ(ಥೈ), ಮಾಟ್ಟು ಮತ್ತು ಕಾನುಮ್ ಪೊಂಗಲ್ ಎಂದು ನಾಲ್ಕು ದಿನ ವಿಶೇಷವಾಗಿ ಆಚರಿಸಲಾಗುತ್ತದೆ. ತಮಿಳುನಾಡು ಸಮೀಪದಲ್ಲೇ ಇರುವ ಈ ಗ್ರಾಮಗಳಲ್ಲಿ ಅಲ್ಲಿನ ಹಬ್ಬದ ಆಚರಣೆಗಳು ಚಾಲ್ತಿಯಲ್ಲಿವೆ. ಅಂತೆಯೇ ಜ.14ರಂದು ಮನೆಯ 4 ಮೂಲೆಯಲ್ಲಿ ಮತ್ತು ದೇವಾಲಯಗಳ ಮುಂದೆ ಬೇವಿನ ಸೊಪ್ಪು ವಿವಿಧ ಬಗೆಯ ಹೂಗಳನ್ನು ಕಟ್ಟಲಾಗುತ್ತದೆ. ನಂತರ ಅನ್ನ, ಕುಂಬಳ ಕಾಯಿ, ಆವರೆ ಕಾಯಿ ಪಲ್ಯ ಮಾಡಿ ಬಾಳೆ ಎಲೆಯಲ್ಲಿ ಇಟ್ಟು ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.