ಹುಬ್ಬಳ್ಳಿಯಲ್ಲಿ ಸಂಕ್ರಾಂತಿ ಸಂಭ್ರಮ, ಪಿಕ್ನಿಕ್ ತಾಣಗಳಲ್ಲಿ ಸಹ ಭೋಜನ ಸವಿದ ಜನರು

IMG_20250114_201220_72.jpg
Published on

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಂಗಳವಾರ ಮಕರ ಸಂಕ್ರಮಣದ ಅಂಗವಾಗಿ ಸಂಕ್ರಾಂತಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಉತ್ತರಾಯಣ ಪುಣ್ಯಕಾಲದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮನೆಗಳಲ್ಲಿ ಬೆಳಗ್ಗೆಯಿಂದಲೇ ಹಬ್ಬದಾಚರಣೆಗೆ ಸಿದ್ಧತೆ ಮಾಡಿಕೊಂಡ ಜನರು, ದೇವಸ್ಥಾನಗಳಿಗೂ ತೆರಳಿ ಭಕ್ತಿ ಸಮರ್ಪಿಸಿದರು.

ಸೂರ್ಯ ಪಥ ಬದಲಾಗುವ ಈ ಸಂದರ್ಭದಲ್ಲಿ ಒಂದಿಷ್ಟು ಚಳಿ ಕಡಿಮೆಯಾಗುತ್ತಿರುವುದರಿಂದ ಜನರಲ್ಲಿ ಉತ್ಸಾಹ ಮೂಡಿದೆ. ಸೂರ್ಯದೇವನಿಗೆ ನಮಿಸಿದ ಜನರು ಸಂಕ್ರಾಂತಿ ಹಬ್ಬಕ್ಕೆ ಅಣಿಯಾದರು. ಸಂಕ್ರಾಂತಿ ವಿಶೇಷ ಭಕ್ಷ್ಯಗಳನ್ನು ಸಿದ್ಧ ಪಡಿಸಿಕೊಂಡು ಸಹ ಭೋಜನ ಸವಿದರು.

ಕೆಲವೆಡೆ ಭೋಗಿ ಹಬ್ಬವೆಂದು ಆಚರಣೆ ಮಾಡುವ ಈ ಸಂದರ್ಭದಲ್ಲಿ ಬುತ್ತಿ ಕಟ್ಟಿಕೊಂಡು ಹೊರಗಡೆ ಉದ್ಯಾನ, ಪಿಕ್ನಿಕ್ ಸ್ಪಾಟ್ ಗಳಿಗೆ ತೆರಳಿ ಭೋಜನ ಸವಿದರು.

ಮನೆಯಲ್ಲಿ ಮಹಿಳೆಯರು ತರಹೇವಾರಿ ಅಡುಗೆ ಮಾಡಿಕೊಂಡು ಕುಟುಂಬದ ಎಲ್ಲ ಸದಸ್ಯರು, ಬಂಧು ಮಿತ್ರರು ಜತೆಗೂಡಿ ಹಬ್ಬ ಆಚರಣೆ ಮಾಡಿದರು. ಸಹಭೋಜನಕ್ಕೂ ತೆರಳಿದರು.

ಇದರಿಂದ ನಗರದ ಅನೇಕ ಕಡೆಗಳಲ್ಲಿ ಉದ್ಯಾನ, ಪಾರ್ಕ್ ಗಳು ತುಂಬಿ ತುಳುಕುತ್ತಿದ್ದವು.
ನಗರದ ಉಣಕಲ್ಲ ಉದ್ಯಾನ, ಇಂದಿರಾ ಗಾಜಿನ ಮನೆ ಆವರಣ, ಉಣಕಲ್ಲ ನೃಪತುಂಗ ಬೆಟ್ಟ, ರಾಯಾಪುರದ ಸಂಜೀವಿನಿ ಪಾರ್ಕ್ ಹೀಗೆ ಅನೇಕ ಸ್ಥಳಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಸಂಕ್ರಾಂತಿ ವಿಶೇಷತೆಯಾದ ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಕರ್ಚಿಕಾಯಿ, ಮಾದಲಿ, ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಚಟ್ನಿ, ಮೊಸರನ್ನ ಮುಂತಾದವುಗಳನ್ನು ಸವಿದು ಸಂಭ್ರಮಪಟ್ಟರು. ಮಕ್ಕಳು ಆಟೋಟದಲ್ಲಿ ತೊಡಗಿ ಹಬ್ಬದ ಸಡಗರ ಹೆಚ್ಚಿಸಿದರು.

ಸಂಕ್ರಾಂತಿ ವಿಶೇಷತೆಯಾದ ಪರಸ್ಪರ ಎಳ್ಳು ಬೆಲ್ಲ ಕೊಟ್ಟು ಶುಭಾಶಯ ಕೋರಿದರು. ಎಳ್ಳು ಬೆಲ್ಲ ತಿಂದು ಒಳ್ಳೆಯದು ಮಾತಾಡೋಣ ಎಂದು ಹಾರೈಸಿದರು.
ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ ಭೋಗಿ ಹಾಗೂ ಮಕರ ಸಂಕ್ರಾಂತಿಗೆ ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net