

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಜಾನಪದ ಸಂಶೋಧನಾ ಸಂಸ್ಥೆಯಿ೦ದ ಇಲ್ಲಿನ ಸಾಧನಕೇರಿಯ ಉದ್ಯಾನದಲ್ಲಿ ಸಂಕ್ರಾ೦ತಿ ಹಬ್ಬವನ್ನು ಸೋಮವಾರ ವಿಶೇಷವಾಗಿ ಆಚರಿಸಲಾಯಿತು. ಖ್ಯಾತ ಜಾನಪದ ಕಲಾವಿದ ದಿ. ಬಸವಲಿಂಗಯ್ಯ ಹಿರೇಮಠ ಆರಂಭವಿಸಿದ್ದ ಜಾನಪದ ಶೈಲಿಯ ಹಬ್ಬದ ಸಂಭ್ರಮವನ್ನು ಪತ್ನಿ ವಿಶ್ವೇಶ್ವರಿ ಹಾಗೂ ಪುತ್ರ ಭೂಷಣ ಮುಂದುವರಿಸಿಕೊ೦ಡು ಹೋಗುತ್ತಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಸಂಕ್ರಮಣ ಹಬ್ಬವನ್ನು ಸಂಸ್ಥೆಯ ಮಹಿಳೆಯರೊಂದಿಗೆ ಅರ್ಥಪೂರ್ಣವಾಗಿ ಆಚರಿಸಿದರು.
ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಸಂಕ್ರಮಣದ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಸಂಕ್ರಾ೦ತಿ ಹಾಡುಗಳನ್ನು ಹಾಡುತ್ತ ಹಬ್ಬದ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಿದರು.
ಎಳ್ಳು- ಬೆಲ್ಲ ಸೇರಿ ಸಜ್ಜೆ, ಜೋಳದ ಖಡಕ್ ರೊಟ್ಟಿ, ಬದನೆಕಾಯಿ ಬರ್ತಾ, ಹೆಸರುಕಾಳು, ಪುಂಡಿಪಲ್ಯ, ಅವರೆಕಾಳು, ಬದನೆಕಾಯಿ ಎಣ್ಣೆಗಾಯಿ, ಕರಿಹಿಂಡಿ, ಶೇಂಗಾ ಚಟ್ನಿ, ಗುರೆಳ್ಳ ಚಟ್ನಿ, ಮಾದಲಿ, ಶೇಂಗಾ ಹೋಳಿಗೆ, ಚಿತ್ರಾನ್ನ, ಮೊಸರನ್ನ ಸೇರಿ ತರಹೇವಾರಿ ಖಾದ್ಯಗಳು ಹಬ್ಬಕ್ಕೆ ಮೆರುಗು ತಂದವು. ಉದ್ಯಾನದಲ್ಲಿ ಕುಳಿತು ಸಹಭೋಜನ ಸವಿದರು. ಸಂಕ್ರಮಣದ ನಿಮಿತ್ತ ಗಂಗಾ ಪೂಜೆ ನೆರವೇರಿಸಲಾಯಿತು.