ಸಂಕ್ರಾಂತಿಗಿಲ್ಲ ‘ಬಹುರೂಪಿ’ ಸಂಭ್ರಮ

mysore
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಸಂಕ್ರಾಂತಿ ಸಂಭ್ರಮದಲ್ಲಿ ರಂಗ ಸುಗ್ಗಿಗೆ ಕಾರಣವಾಗುತ್ತಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವನ್ನು ಈ ಸಲ ಆಯೋಜನೆ ಮಾಡಿಲ್ಲ. ಇದು ರಂಗಾಸಕ್ತರಿಗೆ ನಿರಾಶೆ ಉಂಟು ಮಾಡಿದೆ.

ದೇಶದ ಪ್ರತಿಷ್ಠಿತ ರೆಪರ್ಟರಿ ಮೈಸೂರು ರಂಗಾಯಣದಿಂದ ‘ಬಹುರೂಪಿ’ ರಂಗಹಬ್ಬವನ್ನು ಸಂಕ್ರಾಂತಿ ಆಸುಪಾಸಿನಲ್ಲಿ ಆಯೋಜಿಸುವುದು ವಾಡಿಕೆ. ಪ್ರತಿ ಜನವರಿ 2 ಅಥವಾ 3ನೇ ವಾರದಲ್ಲಿ ಹಮ್ಮಿಕೊಳ್ಳಲಾಗುತ್ತಿತ್ತು. ಸಂಕ್ರಾತಿ ಸಡಗರದೊಂದಿಗೆ ರಂಗಾಸಕ್ತರಿಗೆ ಎಳ್ಳುಬೆಲ್ಲದ ಸವಿ, ಸುಗ್ಗಿಯ ಹಿಗ್ಗನ್ನು ತರುವುದರೊಂದಿಗೆ, ರಂಗಹಬ್ಬದ ಮುದವನ್ನೂ ಉಣಬಿಡಿಸುತ್ತಿತ್ತು. ಆದರೆ ಈ ಸಲ ಸಂಭ್ರಮ ಮೇಳೈಸಿಲ್ಲ. ರಂಗಾಯಣ ಇಷ್ಟು ವರ್ಷ ಪಾಲನೆ ಮಾಡಿಕೊಂಡು ಬಂದಿದ್ದ ಸಂಪ್ರದಾಯವನ್ನೇ ಮುರಿದಿದೆ.

ಬಹುರೂಪಿ’ ಕೈಬಿಟ್ಟಿರುವುದು ಸರಿಯಲ್ಲ.


‘ಬಹುರೂಪಿ’ ಬದಲಿಗೆ ಮೈಸೂರು ರಂಗಾಯಣ ಅನ್ಯ ನಾಟಕೋತ್ಸವಕ್ಕೆ ನೆರವಾಗಿದೆ. ರಂಗಾಯಣ ಮತ್ತು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಸಹಯೋಗದಲ್ಲಿ ಮೈಸೂರು ಸಂಕ್ರಾಂತಿ ರಂಗಹಬ್ಬವನ್ನು ಹಮ್ಮಿಕೊಂಡಿದೆ. ರಂಗಕಲೆಗೆ ಉತ್ತೇಜನ ನೀಡುವುದು ಸರಿ. ಆದರೆ, ‘ಬಹುರೂಪಿ’ ಕೈಬಿಟ್ಟಿರುವುದು ಸರಿಯಲ್ಲ. ಈ ನಿರ್ವಾತವನ್ನು ಮುಚ್ಚಿಕೊಳ್ಳಲು ಪರ್ಯಾಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ‘ಬಹುರೂಪಿ’ ನಡೆಸಿದಂತಾಗುವುದಿಲ್ಲ ಎಂದು ರಂಗಕರ್ಮಿಗಳು ಕಿಡಿಕಾರಿದ್ದಾರೆ.


‘ರಂಗಾಯಣದಿಂದ ಎರಡು ರಂಗೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ರಂಗಕರ್ಮಿ ಸಿ.ಬಸವಲಿಂಗಯ್ಯ ನಿರ್ದೇಶನದಲ್ಲಿ ಬಂಜಾರ ಸಮುದಾಯದ ಕುರಿತು ಹೊಸ ನಾಟಕ ರಚನೆ ತಯಾರಿ ನಡೆಯುತ್ತಿದೆ. ಈ ಕಾರಣದಿಂದ ಬಹುರೂಪಿ ನಾಟಕೋತ್ಸವ ಏರ್ಪಡಿಸಲು ಆಗಿಲ್ಲ. ಇದನ್ನು ಮುಂದಿನ ಮಾರ್ಚ್‌ನಲ್ಲಿ ಹಮ್ಮಿಕೊಳ್ಳಲಾಗುವುದು’ ಎಂದು ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ಆಯೋಜನೆಗೆ ಸೂಕ್ತ ಸಮಯವಲ್ಲ


ರಂಗಾಯಣದ ಪ್ರಮುಖ ಕಾರ್ಯಕ್ರಮ ‘ಬಹುರೂಪಿ’ ನಾಟಕೋತ್ಸವ. ಇದಕ್ಕೆ ತನ್ನದೇ ಆದ ಮಹತ್ವ ಇದೆ. ಆದರೆ, ನಿಗದಿತ ಸಮಯದಲ್ಲೇ ಇದನ್ನು ನಡೆಸಬೇಕಿತ್ತು. ಆದರೀಗ ಮುಂದೂಡಿರುವ ಈ ಕಾರ್ಯಕ್ರಮ ಮಾರ್ಚ್‌ನಲ್ಲಿ ಆಯೋಜನೆಗೆ ಸೂಕ್ತ ಸಮಯವಲ್ಲ. ಆ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಆಗಿರುತ್ತದೆ. ಅನೇಕ ಅಡೆತಡೆಗಳು ಎದುರಾಗಲಿವೆ. ಜನಪ್ರತಿನಿಧಿಗಳು ಭಾಗವಹಿಸಲು ನಿರ್ಬಂಧ ಇರುತ್ತದೆ. ಇದರಿಂದ ರಂಗಾಯಣದ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡುವ ಅವಕಾಶವೂ ತಪ್ಪಿಹೋಗಲಿದೆ. ಜತೆಗೆ, ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಮತ್ತು ಅಧಿಕಾರಿಗಳಿಂದ ಸಹಕಾರ ದೊರೆಯುವುದು ಸಹ ಕಷ್ಟಕರವಾಗಲಿದೆ.


ಈ ರಂಗಹಬ್ಬ ಹಮ್ಮಿಕೊಳ್ಳಲು ಸಂಕ್ರಾಂತಿ ಸೂಕ್ತ ಸಮಯ. ರಂಗಾಯಣ ಪ್ರತಿವರ್ಷ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದೆ. ಆದರೆ ಪ್ರಸ್ತುತ ವರ್ಷ ಈ ಸಂಪ್ರದಾಯಕ್ಕೆ ಎಳ್ಳುನೀರು ಬಿಟ್ಟಿರುವುದು ಸಮಂಜಸವಲ್ಲ. ಮುಂದಿನ ದಿನಗಳಲ್ಲಿ ಬರುವ ಅಧಿಕಾರಿಗಳಿಗೆ, ನಿರ್ದೇಶಕರಿಗೆ ಇದು ಕೆಟ್ಟ ಉದಾಹರಣೆಯಾಗಲಿದೆ. ಅವರು ಸಹ ತಮ್ಮ ಅನುಕೂಲಕ್ಕೆ ತಕ್ಕಂತೆ ಮತ್ತು ತಮಗೆ ಬೇಕಾದ ಸಮಯದಲ್ಲಿ ಆಯೋಜನೆ ಮಾಡಿದರೆ ಏನು ಗತಿ ಎಂಬುದು ರಂಗಾಸಕ್ತರ ಪ್ರಶ್ನೆಯಾಗಿದೆ.

ಅನ್ಯ ಕಾರ್ಯಕ್ರಮದ ನೆಪ ಸರಿಯಲ್ಲ

ಕರೊನಾ ಕಾರಣಕ್ಕೆ 2022ರಲ್ಲಿ ‘ಬಹುರೂಪಿ’ಯನ್ನು ಮಾರ್ಚ್‌ನಲ್ಲಿ ಏರ್ಪಡಿಸಲಾಗಿತ್ತು. ಈಗ ಅಂತಹ ಸಂಕಟದ ಕಾಲವಿಲ್ಲ. ಹೀಗಾಗಿ, ನಿಗದಿತ ವೇಳಾಪಟ್ಟಿಯಂತೆ ಇದನ್ನು ನಡೆಸಿಕೊಂಡು ಹೋಗುವ ಸಂಪ್ರದಾಯವನ್ನು ಮುಂದುವರಿಸಬೇಕಿತ್ತು. ಇದಕ್ಕೆ ಆಡಳಿತ ನಿರ್ವಹಣೆ, ಅನ್ಯ ಕಾರ್ಯಕ್ರಮದ ನೆಪ ಹೇಳುವ ಅಗತ್ಯ ಇರಲಿಲ್ಲ ಎಂದು ರಂಗಕರ್ಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


‘ಬಹುರೂಪಿ’ ಕೇವಲ ನಾಟಕಗಳ ಪ್ರದರ್ಶನದ ಹಬ್ಬವಲ್ಲ. ಸಮಾಜಕ್ಕೆ ಕನ್ನಡಿ ಹಿಡಿಯುವ ವಸ್ತುವಿಷಯದ ಆಧಾರದಲ್ಲಿ ಇದು ನಡೆಯುತ್ತದೆ. ಪ್ರತಿವರ್ಷ ಒಂದು ವಿಷಯಾಧಾರಿತವಾಗಿ ನಡೆದುಕೊಂಡು ಬಂದಿದೆ. ‘ವಿಲಿಯಂ ಶೇಕ್ಸ್‌ಪಿಯರ್’, ‘ಭಾರತೀಯತೆ’, ‘ಅಭಿವ್ಯಕ್ತಿ’, ‘ಸೂಫಿ’, ‘ತಾಯಿ’… ಹೀಗೆ ವಿವಿಧ ಸಂದೇಶದಡಿ ಏರ್ಪಡಿಸಿದ್ದ ‘ಬಹುರೂಪಿ’ಗೆ ರಂಗು ತುಂಬಲಾಗಿತ್ತು. ಜತೆಗೆ, ವೈಚಾರಿಕತೆ, ಸಾಮಾಜಿಕ ಸಂದೇಶವನ್ನು ಬಿತ್ತುವ ವೇದಿಕೆಯಾಗಿತ್ತು. ಆದ್ದರಿಂದ ಈ ನಾಟಹಬ್ಬವನ್ನು ಕಣ್ತುಂಬಿಕೊಳ್ಳಲು ವಿವಿಧ ಭಾಗಗಳಿಂದ ರಂಗಪ್ರೇಮಿಗಳು ಇಲ್ಲಿಗೆ ದೌಡಾಯಿಸುತ್ತಿದ್ದರು. ಆದರೆ, ಇದಕ್ಕೆ ಈ ಸಲ ಅವಕಾಶ ದೊರೆತಿಲ್ಲ.

‘ಬಹುರೂಪಿ’ಯಲ್ಲಿ ಏಕಕಾಲದಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯಮಟ್ಟದ ತಂಡಗಳು ರಂಗಕಲೆಯನ್ನು ಪ್ರಸ್ತುತಪಡಿಸಿ ಹೊಸ ರೀತಿಯ ಅನುಭವ ನೀಡುವ ಮೂಲಕ ರಂಗಾಸಕ್ತರನ್ನು ಚಕಿತಗೊಳಿಸಲಾಗುತ್ತಿತ್ತು. ವೃತ್ತಿಪರ, ಹವ್ಯಾಸಿ, ವೃತ್ತಿಕಂಪನಿ ನಾಟಕ, ಪೌರಾಣಿಕ ನಾಟಕಗಳಿಗೂ ಅವಕಾಶ ದೊರೆಯುತ್ತಿತ್ತು.

ನಾಟಕ ನೋಡುವ ಅವಕಾಶ ಸಿಗಲಿಲ್ಲ

ವಿದೇಶಿ ಕಲಾವಿದರು ಅಭಿನಯಿಸಿದ ನಾಟಕವನ್ನು ನೋಡುವ ಅವಕಾಶ ವರ್ಷಕ್ಕೆ ಒಮ್ಮೆ ದೊರೆಯುತ್ತಿತ್ತು. ಜತೆಗೆ, ಕೇರಳ, ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳ ಹಲವು ಭಾಷೆಯ ನಾಟಕ ತಂಡಗಳು ರಂಗಾಯಣದ ಭೂಮಿಗೀತ, ವನರಂಗ, ಕಿರುರಂಗಮಂದಿರ, ಕಲಾಮಂದಿರದಲ್ಲಿ ಪ್ರದರ್ಶನ ನೀಡುತ್ತಿದ್ದವು. ಧಾರವಾಡ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ತಂಡಗಳ ಕನ್ನಡ ನಾಟಕಗಳನ್ನು ನೋಡಲು ವೀಕ್ಷಕರು ಮುಗಿಬೀಳುತ್ತಿದ್ದರು.

ರಂಗಸಂಸ್ಕೃತಿ ಸಡಗರ ಇಲ್ಲ

ಬಯಲಾಟ, ಯಕ್ಷಗಾನ, ದೊಡ್ಡಾಟ, ಗೊಂಬೆಯಾಟ, ಜೋಗತಿ ನೃತ್ಯ ಸೇರಿದಂತೆ ವಿವಿಧ ಜಾನಪದ ಕಲೆಗಳ ಪ್ರದರ್ಶನ ನಿತ್ಯ ಮೇಳೈಸುತ್ತಿತ್ತು. ಹೊರ ರಾಜ್ಯಗಳ ಜಾನಪದ ಕಲೆಗಳನ್ನೂ ನೋಡಲು ಅವಕಾಶ ದೊರೆಯುತ್ತಿತ್ತು. ಇದರೊಂದಿಗೆ, ರಂಗಭೂಮಿ ಕುರಿತು ವಿಚಾರ ಸಂಕಿರಣ, ಶ್ರೀರಂಗದಲ್ಲಿ ಚಲನಚಿತ್ರೋತ್ಸವ, ಕುಶಲಕರ್ಮಿಗಳ ಕರಕುಶಲ ವಸ್ತುಗಳ ಪ್ರದರ್ಶನ, ಪುಸ್ತಕ ಪ್ರದರ್ಶನ ಇರುತ್ತಿತ್ತು. ಆದರೆ, ಈ ರಂಗ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳುವ ಅವಕಾಶದಿಂದ ಈ ಬಾರಿ ರಂಗಾಸಕ್ತರು ವಂಚಿತರಾಗಿದ್ದಾರೆ.

8 ತಿಂಗಳಿಂದ ರಂಗಾಯಣ ನಿರ್ದೇಶಕರ ಸ್ಥಾನ ಖಾಲಿ

ರಂಗಾಯಣದ ನಿರ್ದೇಶಕ ಹುದ್ದೆ 8 ತಿಂಗಳಿಂದ ಖಾಲಿ ಇದೆ. ಅಧಿಕಾರಿಗಳ ದರ್ಬಾರ್ ಹೆಚ್ಚಾಗಿದೆ. ಅಧಿಕಾರ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಡ್ಡಂಡ ಸಿ.ಕಾರ್ಯಪ್ಪ 2023ರ ಮೇ 15ರಂದು ರಾಜೀನಾಮೆ ನೀಡಿದರು. ಅಂದಿನಿಂದ ಈ ಹುದ್ದೆ ಭರ್ತಿಯಾಗಿಲ್ಲ. ಕಾಂಗ್ರೆಸ್ ಸರ್ಕಾರ ಈ ಸ್ಥಾನಕ್ಕೆ ಹೊಸಬರನ್ನು ನೇಮಿಸಲು ವಿಳಂಬ ಮಾಡುತ್ತಿದೆ. ಇದರಿಂದ ಇದು ರಂಗಾಯಣದ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.

ನಿರ್ದೇಶಕರು ಇದ್ದಿದ್ದರೆ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಪಡೆದುಕೊಂಡು ಬಹುರೂಪಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರು. ಅವರಿಲ್ಲದ ಸಂದರ್ಭದಲ್ಲಿ ಅಧಿಕಾರಿಗಳು ಈ ಪ್ರಯತ್ನ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಮೊದಲು ನಿರ್ದೇಶಕರನ್ನು ನೇಮಕ ಮಾಡಬೇಕು ಎಂಬುದು ರಂಗಭೂಮಿ ಸಮುದಾಯದ ಒತ್ತಾಸೆಯಾಗಿದೆ.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಕೈಬಿಟ್ಟಿಲ್ಲ. ರಂಗಾಯಣದ ವಿವಿಧ ಕಾರ್ಯಕ್ರಮಗಳಿಂದಾಗಿ ಈ ಸಲ ಸಂಕ್ರಾಂತಿ ಸಂದರ್ಭದಲ್ಲಿ ಮಾಡಲು ಆಗಲಿಲ್ಲ. ಮಾರ್ಚ್‌ನಲ್ಲಿ ಇದು ನಡೆಯಲಿದೆ.
ನಿರ್ಮಲಾ ಮಠಪತಿ, ಉಪ ನಿರ್ದೇಶಕಿ, ರಂಗಾಯಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net