

ಶಿವಮೊಗ್ಗ: ಉಡುಪಿ ಕೃಷ್ಣ ಮಠಕ್ಕೂ ನನಗೂ ಕೃಷ್ಣ ಮತ್ತು ಕನಕನ ಸಂಬಂಧವಿದೆ. ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಹೊಸಪೇಟೆಗೆ ತೆರಳುವವರಿದ್ದರು. ಸೌಹಾರ್ದವಾಗಿ ನನ್ನ ಮನೆಗೆ ಭೇಟಿ ನೀಡಿದ್ದಾರಷ್ಟೇ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ವಿಶ್ವಪ್ರಸನ್ನತೀರ್ಥರ ಭೇಟಿ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಕಿಲ್ಲ. ಈ ಹಿಂದೆಯೂ ನಮ್ಮ ಮನೆಗೆ ಹಲವಾರು ಬಾರಿ ಬಂದಿದ್ದಾರೆ. ಸಾಧು ಸಂತರು, ಮಠಾಧೀಶರ ಬಗ್ಗೆ ನನಗೆ ಗೌರವವಿದೆ. ಅವರಿಗೂ ನನ್ನ ಮೇಲೆ ಪ್ರೀತಿಯಿದೆ ಎಂದರು.
ಬಾಗಲಕೋಟೆಯಲ್ಲಿ ನಡೆದ ಸಭೆಯಲ್ಲಿ ಸುಮಾರು 100 ಮಠಾಧೀಶರು ಭಾಗವಹಿಸಿದ್ದರು. ನೂತನವಾಗ ಅಸ್ತಿತ್ವಕ್ಕೆ ಬರಲಿರುವ ಬ್ರಿಗೇಡ್‌ಗೆ ಸಂಕ್ರಾಂತಿ ದಿನದಂದು ಹೆಸರಿಡಲಾಗುವುದು. ಹಿಂದುಗಳು, ಹಿಂದುಳಿದವರ ರಕ್ಷಣೆಗಾಗಿ ಈ ಬ್ರಿಗೇಡ್ ಕೆಲಸ ಮಾಡಲಿದೆ ಎಂದು ತಿಳಿಸಿದರು.