

ಮಂಡ್ಯ: ಹಾಲು, ಮೊಸರು, ತುಪ್ಪವನ್ನು ತಿನ್ನಲು ಗೋವುಗಳನ್ನು ಬಳಸಿಕೊಳ್ಳುತ್ತೇವೆ. ಆದರೆ ಆ ಗೋವಿನ ಕೆಚ್ಚಲನ್ನು ಕತ್ತರಿಸುವವರಿಗೂ ಸಹಕಾರ ನಿಡುತ್ತಿರುವ ಇಂತಹ ವ್ಯವಸ್ಥೆಗೆ ಏನು ಹೇಳಬೇಕು ಎಂದು ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಕಾವೇರಿ ನಗರದಲ್ಲಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೀರಭಾಗ್ಯ ಸೇರಿದಂತೆ ಗೋವಿನಿಂದ ಸಕಲ ಭಾಗ್ಯವನ್ನೂ ಪಡೆದು ಅದರ ಕೆಚ್ಚಲನ್ನೇ ಕೊಯ್ದು ಹಾಕುವ ಸಮಾಜದಲ್ಲಿ ನಾವಿದ್ದೇವೆ. ಭತ್ತ, ಕಬ್ಬು, ರಾಗಿ ಸೇರಿದಂತೆ ಎಲ್ಲ ಬೆಳೆಗಳನ್ನೂ ಬೆಳೆಯಲು ಗೋವನ್ನು ಉಪಯೋಗಿಸಿಕೊಂಡು ಅದರ ಹಾಲು, ಮೊಸರು, ತುಪ್ಪವನ್ನು ತಿನ್ನಲು ಗೋವನ್ನು ಬಳಸಿಕೊಂಡು ಪೂಜಿಸುತ್ತೇವೆ. ಅಂತಹ ನಾಡಲ್ಲಿ ಇಂತಹ ಘಟನೆ ನಡೆಯುವುದು ಸರಿಯಲ್ಲ ಎಂದರು.
ಯಾವ ದೇಶದಲ್ಲಿ ಗೋವು ಪೂಜನೀಯ ಹಾಗೂ ಸಂರಕ್ಷಣೆಯ ಸ್ಥಾನ ಪಡೆಯುತ್ತದೆಯೋ ಆ ದೇಶ ಸಮೃದ್ಧವಾಗಿರುತ್ತದೆ. ಭಾರತದಲ್ಲಿ ಗೋವಿಗೆ ವಿಶೇಷ ಸ್ಥಾನಮಾನವಿದೆ. ಆದರೆ ಅದರ ಗೋಮೂತ್ರ ಪೆಟೆಂಟ್ ಮಾತ್ರ ಅಮೆರಿಕದ್ದಾಗಿದೆ. ಏಕೆಂದರೆ ಅದು ಔಷಧ ಗುಣ ಹೊಂದಿರುತ್ತದೆ ಎಂಬ ಕಾರಣಕ್ಕೆ ಅವರು ಪೆಟೆಂಟ್ ಪಡೆದಿದ್ದಾರೆ. ಕೆಲಸಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಕಟುಕನಿಗೆ ಕೊಟ್ಟ ಗೋವನ್ನು ಆತ ಕಂಟೈನರ್‌ನಲ್ಲಿ ಕೆಲವೇ ಕೆಲವು ಗೋವುಗಳನ್ನು ತುಂಬುವಂತಹ ಸ್ಥಳದಲ್ಲಿ 40ಕ್ಕೂ ಹೆಚ್ಚು ಗೋವಿಗಳನ್ನು ತುಂಬಿಕೊಂಡು ಹೋಗುತ್ತಾರೆ. ಅದನ್ನು ನಿರ್ಧಯಿಯಿಂದ ಕೊಂದು ಅದರ ಮಾಂಸ ಉಪಯೋಗಿಸುತ್ತಾನೆ. ತನ್ನ ಕರುವಿಗಾಗಿ ಕೆಚ್ಚಲಲ್ಲಿ ಉಳಿಸಿಕೊಂಡಿರುವ ಹಾಲನ್ನು ಮನುಷ್ಯನಿಗೆ ಕೊಟ್ಟು ಬದುಕಿನ ಕೊನೆ ಘಟ್ಟದಲ್ಲಿರುವಾಗ ಅತ್ಯಂತ ಭೀಕರವಾಗಿ ಕೊಲ್ಲಲ್ಪಡುವಂತಹ ಸ್ಥಿತಿಗೆ ಗೋವನ್ನು ನೂಕುತ್ತಿದ್ದೇವೆ ಎಂದು ವಿಷಾದಿಸಿದರು.
ಬೆಂಗಳೂರಿನಲ್ಲಿ ಗೋವಿನ ಕೆಚ್ಚಲನ್ನು ಕೊಯ್ದರು. ಮತ್ತೊಬ್ಬರು ಬಂದು ಗೋವನ್ನು ಕೊಡಿಸುತ್ತೇವೆ ಎನ್ನುತ್ತಾರೆ. ನಾಳೆ ನಮ್ಮ ಮಕ್ಕಳ ಮೇಲೆ ಅತ್ಯಾಚಾರ ಎಸಗಿದಾಗಲೂ ನಿಮಗೆ ಇನ್ನೊಂದು ಮಗುವನ್ನು ಕೊಡಿಸುತ್ತೇವೆ ಎಂದು ಹೇಳಿದರೆ ಅದಕ್ಕೆ ಒಪ್ಪಿಕೊಳ್ಳುತ್ತೀವಾ? ಎಂದು ಪ್ರಶ್ನಿಸಿದರು.