

ಮಂಡ್ಯ: ಪ್ರಸ್ತುತ ದಿನಗಳಲ್ಲಿ ರೈತರು ಕೃಷಿ ಉತ್ಪನ್ನಗಳ ಉದ್ಯಮಿಗಳಾಗುವುದು ಅವಶ್ಯಕ ಎಂದು ನೇಗಿಲಯೋಗಿ ಸಮಾಜ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ರಮೇಶ್ ಹೇಳಿದರು.
ನೇಗಿಲಯೋಗಿ ಸಮಾಜ ಸೇವಾ ಸಂಸ್ಥೆ ಜಿಲ್ಲಾ ಘಟಕ, ಜೈ ಕರ್ನಾಟಕ ಪರಿಷತ್, ರೋಟರಿ ಸಂಸ್ಥೆ ಜಿಲ್ಲಾ ಶಾಖೆ ಸಹಯೋಗದಲ್ಲಿ ನಗರದ ರೈತರ ಸೊಸೈಟಿ ಆವರಣದಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಕ್ರಾಂತಿ ರೈತ ಸಂಸ್ಕೃತಿಯ ಅಸ್ಮಿತೆ. ಹೀಗಾಗಿ ರೈತ ಉತ್ಪಾದಕ ಕಂಪನಿ ಸ್ಥಾಪಿಸಲು ನೇಗಿಲಯೋಗಿ ಸಂಸ್ಥೆ ಮುಂದಾಗಿದೆ ಎಂದು ಹೇಳಿದರು.
ಸೇವಾ ಸಂಸ್ಥೆಯ ಕಾರ್ಯ ಸಾಧನೆಗಳನ್ನು ಕಂಡ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ಉತ್ಪಾದಕ ಕಂಪನಿ ತೆರೆಯಲು ಅನುಮತಿ ನೀಡಿದೆ. ಅದರಂತೆ ಮುಂದಿನ ದಿನಗಳಲ್ಲಿ ಸಂಸ್ಥೆ ವತಿಯಿಂದ ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಲಾಗುವುದು. ಒಟ್ಟು 14 ಕಂಪನಿಗಳು ಸಂಸ್ಥೆ ಮೂಲಕ ಆರಂಭಗೊಳ್ಳಲಿದ್ದು, ಮಂಡ್ಯದಲ್ಲಿ 9, ಮೈಸೂರಿನಲ್ಲಿ 5, ಕೊಡಗಿನಲ್ಲಿ 3 ಕಂಪನಿ ನೋಂದಣಿಯಾಗಿವೆ. ಜಲಾಯನ ಇಲಾಖೆ ಆಯಕ್ತ ಡಾ.ವೆಂಕಟೇಶ್ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಹಕಾರದಿಂದ ಸಾಧ್ಯವಾಗುತ್ತಿದ್ದು, ನಿವೃತ್ತ ಇಂಜಿನಿಯರ್ ಬಸವರಾಜು ಅವರ ಸಹಕಾರದಲ್ಲಿ ರೈತ ಉತ್ಪಾದಕ ಕಂಪನಿಗಳು ಮಂಡ್ಯ ನೆಲದಲ್ಲಿ ಆರಂಭಗೊಳ್ಳುತ್ತಿವೆ ಎಂದು ವಿವರಿಸಿದರು.
ಜಂಟಿ ಕೃಷಿ ನಿರ್ದೇಶಕ ಡಾ.ವಿ.ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಜಿಲ್ಲೆಯಲ್ಲಿ ಸರಾಸರಿ ಭತ್ತ ಮತ್ತು ರಾಗಿ ಇಳುವಳಿ ಎಷ್ಟಿದೆ ಎಂದು ಕೇಳಿದ್ದರು. ರಾಜ್ಯದ ಇಳುವರಿಗಿಂತ ಹೆಚ್ಚಿದೆಯಾ ಕಡಿಮೆ ಇದೆಯಾ ಎನ್ನುವ ಮಾಹಿತಿಯನ್ನು ಪರಿಶೀಲಿಸಿದಾಗ ಆಶ್ಚರ್ಯ ಮತ್ತು ಭಯ ಉಂಟು ಮಾಡಿದೆ. 2010-11ರಲ್ಲಿ ಒಂದು ಹೇಕ್ಟರ್ ಪ್ರದೇಶದಲ್ಲಿ ಶೇ.59.33 ಕ್ವಿಂಟಾಲ್ ಭತ್ತ ಉತ್ಪಾದನೆಯಾಗುತ್ತಿತ್ತು, 2022-23ರಲ್ಲಿ ಶೇ.44.09 ಕ್ವಿಂಟಾಲ್‌ಗೆ ಇಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪರಿವರ್ತನಾ ಸಂಸ್ಥೆಯ ಪುಟ್ಟೇಗೌಡ, ರೈತ ನಾಯಕಿ ಸುನಂದಾ ಜಯರಾಮ್, ರೈತೋತ್ಪದಕ ಕಂಪನಿ ಬಸವರಾಜು, ಕೌಶಲಜ್ಞಾನ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ರೋಟರಿ ಅಧ್ಯಕ್ಷೆ ಬಿ.ಎಸ್.ಅನುಪಮಾ, ನೇಗಿಲಯೋಗಿ ಮಹಿಳಾಧ್ಯಕ್ಷೆ ಸುಜಾತಾ ಸಿದ್ದಯ್ಯ, ರೈತ ಮುಖಂಡ ಮುದ್ದೇಗೌಡ, ಸುಶೀಲಮ್ಮ ಇತರರಿದ್ದರು.
ಇದೇ ಸಂದರ್ಭದಲ್ಲಿ ಮೇಟಿ ಅಂಗಳದಲ್ಲಿ ದವಸ-ಧ್ಯಾನ ರಾಶಿ ಮಾಡಿ, ನೇಗಿಲು, ಕೃಷಿ ಉತ್ಪನ್ನ ವಸ್ತುಗಳನ್ನು ಜೋಡಿಸಿ ಪೂಜೆ ಮಾಡಲಾಯಿತು. ತಮಟೆ-ನಗಾರಿ ಸದ್ದಿನೊಂದಿಗೆ ರಾಸುಗಳನ್ನು ಕಿಚ್ಚು ಹಾಯಿಸಲಾಯಿತು. ಬಳಿಕ ಪೊಂಗಲ್-ಸಿಹಿ ವಿತರಣೆ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿನ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.