ನೃಪತುಂಗ ಬೆಟ್ಟದಲ್ಲಿ ಸಂಕ್ರಾಂತಿ ಸಂಭ್ರಮ

H14 Nrupatunga Betta 1
Published on

ಹುಬ್ಬಳ್ಳಿ: ಕರೊನಾ ಹಿನ್ನೆಲೆಯಲ್ಲಿ ನೃಪತುಂಗ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೂ ಸಂಕ್ರಾಂತಿ ಹಿನ್ನೆಲೆಯಲ್ಲಿ ಗುರುವಾರ ಸಾವಿರಾರು ಜನ ಬೆಟ್ಟಕ್ಕೆ ಆಗಮಿಸಿ ಹಬ್ಬದೂಟ ಸವಿದರು. ಮಕ್ಕಳು ಆಟ ಆಡಿ ಸಂಭ್ರಮಿಸಿದರು.

ಕರೊನಾ ಸೋಂಕು ಹರಡದಂತೆ ತಡೆಯಲು ಸಂಕ್ರಾಂತಿಯಂದು ನೃಪತುಂಗ ಬೆಟ್ಟ, ಉಣಕಲ್ ಕೆರೆ ಉದ್ಯಾನ ಹಾಗೂ ನೀರಸಾಗರ ಕೆರೆಯಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಬುಧವಾರ ಆದೇಶ ಹೊರಡಿಸಿದ್ದರು. ಬೆಳಗ್ಗೆ 8 ಗಂಟೆಯಿಂದ ರಾತ್ರಿ 12ರವರೆಗೆ ಪ್ರವೇಶ ನಿಷೇಧಿಸಲು ಸೂಚಿಸಿದ್ದರು. ಆದರೆ, ಅರಣ್ಯ ಇಲಾಖೆ ಮಾತ್ರ ಜಿಲ್ಲಾಧಿಕಾರಿ ಆದೇಶಕ್ಕೂ ನಮಗೂ ಸಂಬಂಧ ಇಲ್ಲ ಎಂಬಂತೆ ನೃಪತುಂಗ ಬೆಟ್ಟದಲ್ಲಿ ಸಾರ್ವಜನಿಕರಿಗೆ ಪ್ರವೇಶ ನೀಡಿತ್ತು. ಹೆಚ್ಚುವರಿ ಟಿಕೆಟ್ ಕೌಂಟರ್ ಸಹ ಆರಂಭಿಸಿತ್ತು.

‘ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ನಮಗೆ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ, ಎಂದಿನಂತೆ ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ (ಆರ್​ಎಫ್​ಒ) ಶ್ರೀಧರ ತೆಗ್ಗಿನಮನಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು.

ಶುಲ್ಕ ಸಂಗ್ರಹ: ನೃಪತುಂಗ ಬೆಟ್ಟದಲ್ಲಿ 3ರಿಂದ 12 ವರ್ಷದೊಳಗಿನ ಮಕ್ಕಳಿಗೆ 10 ರೂ. ಹಾಗೂ 12 ವರ್ಷ ಮೇಲ್ಪಟ್ಟವರಿಗೆ 20 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಇಂದಿರಾ ಗಾಜಿನ ಮನೆ, ಉಣಕಲ್ ಕೆರೆ ಉದ್ಯಾನ ಬಂದ್ ಆಗಿದ್ದರಿಂದ ಗುರುವಾರ ಸಾವಿರಾರು ಜನ ಬೆಟ್ಟಕ್ಕೆ ಆಗಮಿಸಿದ್ದರಿಂದ ಭಾರಿ ಮೊತ್ತದ ಶುಲ್ಕ ಸಂಗ್ರಹವಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಸೂಕ್ತ ಕ್ರಮದ ಎಚ್ಚರಿಕೆ ನೀಡಿದ್ದರು

ಆದೇಶ ಉಲ್ಲಂಘಿಸುವವರ ವಿರುದ್ಧ ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಕೋವಿಡ್- 19 ರೆಗ್ಯುಲೇಶನ್ 2020 ಅನ್ವಯ ಹಾಗೂ ಐಪಿಸಿ ಕಲಂ 188 ಅನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶದಲ್ಲಿ ತಿಳಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಯವರು ಯಾವ ಕ್ರಮ ಜರುಗಿಸುವರು ಎಂದು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net