ಬಿಟಿಎಂ ಮತಕ್ಷೇತ್ರದಲ್ಲಿ ಅದ್ದೂರಿ ಸಂಕ್ರಾಂತಿ ಆಚರಣೆ

ramalinga reddy
Published on

ಬೆಂಗಳೂರು: ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿನಿಧಿಸುವ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಅದ್ದೂರಿಯಾಗಿ ಸಂಕ್ರಾಂತಿ ಕಾರ್ಯಕ್ರಮ ನಡೆಯಿತು.

ಇಡೀ ಕ್ಷೇತ್ರದೆಲ್ಲೆಡೆ ಅಕ್ಷರಶಃ ಗ್ರಾಮೀಣ ಸೊಗಡಿನ ವಾತಾವರಣ ಕಂಗೊಳಿಸಿ ಸಹಸ್ರಾರು ಸಂಖ್ಯೆಯಲ್ಲಿ ಮಕ್ಕಳು, ಹೆಂಗಸರು ಸೇರಿ ಸಾರ್ವಜನಿಕರು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಕ್ಷೇತ್ರದ ಎಂಟೂ ವಾರ್ಡ್‌ಗಳಲ್ಲಿ 50ಕ್ಕೂ ಹೆಚ್ಚು ಹಸುಗಳಿಗೆ ಗೋ ಪೂಜೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಿಗೂ ಎಳ್ಳು-ಬೆಲ್ಲ, ಕಬ್ಬು, ಬೇಯಿಸಿದ ಗೆಣಸು, ಕಡಲೆಕಾಯಿಯನ್ನು ನೀಡಿ ಸಂಕ್ರಾಂತಿಯ ಶುಭ ಕೋರಲಾಯಿತು.

ವಿವಿಧೆಡೆ ಆಯೋಜಿಸಿದ್ದ ಅವರೆಕಾಯಿ ರಾಶಿ, ರಾಗಿ ರಾಶಿ, ಧಾನ್ಯಗಳ ರಾಶಿ ಮಾಡಿ ಪೂಜೆ ಮಾಡಿ ಸುಗ್ಗಿಯ ಹಿಗ್ಗಿನ್ನು ಸವಿದರು.

ಕ್ಷೇತ್ರದ ಎಂಟೂ ವಾರ್ಡಗಳಲ್ಲಿ 19 ಕಾರ್ಯಕ್ರಮಗಳನ್ನು ಬೆಳಗ್ಗೆ 10 ಗಂಟೆಯಿಂದ ರಾತ್ರಿ 7ರವರೆಗೆ ಏರ್ಪಡಿಸಲಾಗಿತ್ತು. ಪ್ರಮುಖವಾಗಿ ವಿವಿಧ ಮನರಂಜನೆ, ಸಾಂಸ್ಕೃತಿಕ, ಕ್ರೀಡಾ ಸ್ಫರ್ಧೆ, ರಂಗೋಲಿ, ಜೋಕಾಲಿ, ಸಂಗೀತ ಸ್ಪರ್ಧೆಗಳನ್ನು ಹಮ್ಮಿಕೊಂಡು ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನ ವಿತರಣೆಯನ್ನು ಸ್ಥಳೀಯ ಮುಖಂಡರಿಂದ ವಿತರಿಸಿದರು.

ಕಾರ್ಯಕ್ರಮದಲ್ಲಿ ಸಚಿವರ ಪತ್ನಿ ಚಾಮುಂಡೇಶ್ವರಿ ರಾಮಲಿಂಗಾ ರೆಡ್ಡಿ, ಮಾಜಿ ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಕಾರ್ಪೋರೇಟರ್‌ಗಳಾದ ಮಂಜುನಾಥ್ ರೆಡ್ಡಿ, ಮುರುಗೇಶ್, ಬಿ.ಮೋಹನ್, ಮುಖಂಡರಾದ ಜಿ.ಎನ್.ಆರ್.ಬಾಬು, ರಾಮಚಂದ್ರ, ಚಂದ್ರಪ್ಪ, ಜಿ.ಮಂಜುನಾಥ್ ಹಾಗೂ ಬ್ಲಾಕ್ ಅಧ್ಯಕ್ಷರಾದ ಗೋವರ್ಧನ ರೆಡ್ಡಿ, ಆನಂದ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net