

ಚಿಕ್ಕಬಳ್ಳಾಪುರ: ಹಳ್ಳಿಗಿತ್ತಿಯರ ಮಾದರಿಯಲ್ಲಿ ರಾಗಿ ಕಲ್ಲು ಬೀಸುತ್ತಿದ್ದ ವಿದ್ಯಾರ್ಥಿನಿಯರು, ಪಂಚೆ ಧರಿಸುವುದರೊಂದಿಗೆ ತಲೆಗೆ ಟವಲ್ ಸುತ್ತಿ ತೆನೆ ಕುಯ್ದ ವಿದ್ಯಾರ್ಥಿಗಳು, ಗಮನ ಸೆಳೆದ ಸಿರಿಧಾನ್ಯಗಳು, ಕಿಚ್ಚು ಹಾಯ್ದ ರಾಸುಗಳು, ಆಕರ್ಷಕ ನೃತ್ಯ, ಇಂಪಾದ ಸುಗ್ಗಿಯ ಹಾಡು, ವಿವಿಧ ಸ್ಪರ್ಧೆಗಳು, ವೈಜ್ಞಾನಿಕ ವಸ್ತು ಪ್ರದರ್ಶನ, ಇವು ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಂಕ್ರಾಂತಿ ಸುಗ್ಗಿ ಹುಗ್ಗಿ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ.
ಸೊಗಡಿನ ಹಬ್ಬದ ವಾತಾವರಣದಲ್ಲಿ ಸಂಪ್ರದಾಯ, ಆಚರಣೆಗಳ ಬಗ್ಗೆ ಅರಿವು ಮೂಡಿಸಲಾಯಿತು. ಇನ್ನೂ ವಿದ್ಯಾರ್ಥಿಗಳೇ ವಿವಿಧ ಚಟುವಟಿಕೆಯ ನೇತೃತ್ವ ವಹಿಸಿದ್ದು ವಿಶೇಷವಾಗಿತ್ತು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ಮಾತನಾಡಿ, ಭಾರತೀಯ ಸಂಸ್ಕೃತಿ, ಕಲೆ ಮತ್ತು ಪರಂಪರೆಯು ಶ್ರೇಷ್ಠವಾದುದು. ಇದರ ಬಗ್ಗೆ ಮಕ್ಕಳಲ್ಲಿ ಹೆಚ್ಚಿಗೆ ತಿಳಿಹೇಳಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಮಹತ್ವದ ಸಂದೇಶ ಸಾರುವ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಬೇಕು ಎಂದರು.
ಸೂರ್ಯ ಪಥವನ್ನು ಬದಲಾಯಿಸುವ ಹಿನ್ನೆಲೆಯಲ್ಲಿ ಸಂಕ್ರಾಂತಿ ಆಚರಿಸಲಾಗುತ್ತದೆ. ಹಳ್ಳಿಯ ಸೊಗಡನ್ನು ಬಿಂಬಿಸುವ ಹಬ್ಬವು ರಾಸುಗಳ ಪೂಜೆ, ರಂಗೋಲೆ ಸ್ಪರ್ಧೆ ಸೇರಿ ವಿವಿಧ ಕಾರ್ಯಕ್ರಮಗಳ ವೈಶಿಷ್ಟೃತೆಯನ್ನು ಹೊಂದಿದೆ. ಇಂದು ವಿಜ್ಞಾನ ರಹಿತ ಜೀವನ ಊಹಿಸಲು ಸಾಧ್ಯವಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಬಳಕೆಯಾಗುತ್ತಿದೆ. ಇದಕ್ಕೆ ಮಕ್ಕಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಬಿಜಿಎಸ್ ಆಂಗ್ಲ ಶಾಲೆ ಪ್ರಾಂಶುಪಾಲ ಡಿ.ಸಿ.ಮೋಹನ್‌ಕುಮಾರ್ ಮಾತನಾಡಿ, ಶಿಕ್ಷಣದ ಹೆಸರಿನಲ್ಲಿ ಮಗುವನ್ನು ನಾಲ್ಕು ಗೋಡೆಗಳ ಬಂಧಿಸದೇ ಹೊರಗಿನ ವಾತಾವರಣದಲ್ಲೂ ಗುಣಮಟ್ಟದ ಕಲಿಕೆಯ ನೀಡಬೇಕು. ಕ್ರಿಯಾಶೀಲ ಚಟುವಟಿಕೆಯಿಂದ ಒಳ್ಳೆಯ ಅನುಭವ ಪಡೆಯಬೇಕು. ಇದಕ್ಕೆ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷ ಜ್ಞಾನಾಂಕುರ, ಮಾತೃಭೋಜನ, ಗಾಳಿಪಟ ಉತ್ಸವ ಸೇರಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತ ಬರಲಾಗುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಎಳ್ಳು ಬೆಲ್ಲ, ಪೊಂಗಲ್ ಹಾಗೂ ಕಬ್ಬು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಬಿಜಿಎಸ್ ಪಿಯು ಕಾಲೇಜಿನ ಡೀನ್ ಮಧುಸೂದನ್, ವಿದ್ಯಾರ್ಥಿ ನಿಲಯ ಪಾಲಕ ಎಚ್.ಎಂ.ರಾಜು ಮತ್ತಿತರರು ಇದ್ದರು.
ವೈಜ್ಞಾನಿಕ ವಸ್ತು ಪ್ರದರ್ಶನ: ಸಸಿಯ ವಿವಿಧ ತಳಿಗಳು, ಮಳೆ ಕೊಯ್ಲು, ಕೈಗಾರಿಕೆಗಳ ನಿರ್ವಹಣೆ, ಪರಿಸರ ಮಾಲಿನ್ಯ, ಕಾಡಿನ ಸಂರಕ್ಷಣೆ, ನೀರಾವರಿ, ಹೈನುಗಾರಿಕೆ, ನೀರಿನ ಮರುಬಳಕೆ, ರಾಕೆಟ್, ರೊಬೋಟ್, ಮಾನವನ ಉಸಿರಾಟ ಕ್ರಿಯೆ ಮತ್ತು ವಿಸರ್ಜನೆ ಕ್ರಿಯೆ ಮಾದರಿ, ಶ್ವಾಸ ಕೋಶಗಳ ರಚನೆ, ಆವರ್ತಕ ಕೋಷ್ಟಕ ಸೇರಿ ವಿವಿಧ ಕಲಾಕೃತಿಗಳು ವೈಜ್ಞಾನಿಕ ವಸ್ತು ಪ್ರದರ್ಶನದಲ್ಲಿ ಗಮನ ಸೆಳೆದವು. ವಿದ್ಯಾರ್ಥಿಗಳು ವೀಕ್ಷಕರಿಗೆ ಮಹತ್ವದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.