

ತುಮಕೂರು: ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಸಡಗರದಿಂದ ಕಲ್ಪತರು ನಾಡಿನಲ್ಲಿ ಆಚರಿಸಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಸಿದ್ಧಗಂಗೆಯ ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಭಕ್ತಸಾಗರವೇ ಹರಿದುಬಂದಿತ್ತು. ಕಳೆದ 88 ವರ್ಷಗಳಲ್ಲಿ ಶ್ರೀಗಳ ಅನುಪಸ್ಥಿತಿಯಲ್ಲಿ ನಡೆದ ಮೊದಲ ಸಂಕ್ರಾಂತಿ ಹಬ್ಬ ಇದಾಗಿತ್ತು. ಕ್ಯಾಲೆಂಡರ್ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಆಚರಣೆ ನಗರದೆಲ್ಲೆಡೆ ವಿಶೇಷವಾಗಿತ್ತು.
ಗ್ರಾಮೀಣಭಾಗದಲ್ಲೂ ಸುಗ್ಗಿ ಸಂಭ್ರಮ ಹೆಚ್ಚಿತ್ತು. ರಾಸುಗಳಿಗೆ ಅಲಂಕಾರ ಮಾಡಿ ಕಿಚ್ಚು ಹಾಯಿಸಿ ಸಂಭ್ರಮಪಟ್ಟರೆ, ನಗರದ ಬಹುತೇಕ ದೇವಸ್ಥಾನಗಳೆಲ್ಲಾ ಜನಜಂಗುಳಿಯಿಂದ ತುಂಬಿದ್ದವು. ಕೋಟೆ ಆಂಜನೇಯಸ್ವಾಮಿ, ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನ, ಎಸ್‌ಎಸ್ ಪುರಂ ಸೋಮೇಶ್ವರ ಸ್ವಾಮಿ ದೇವಾಲಯ ಸೇರಿ ಎಲ್ಲ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ, ಅಲಂಕಾರ, ವಿವಿಧ ಧಾರ್ಮಿಕ ಸೇವೆಗಳು ನಡೆದವು. ಕ್ಯಾತಸಂದ್ರದ ಸೋಮೇಶ್ವರ ದೇವಸ್ಥಾನದಲ್ಲಿ ಅಕ್ಕಿಪೂಜೆ ಅಲಂಕಾರ ವಿಶೇಷವಾಗಿತ್ತು.
ಶುಭಾಶಯ ವಿನಿಮಯ: ದೇವಸ್ಥಾನಗಳಲ್ಲಿ ಎಳ್ಳುಬೆಲ್ಲ ಬೀರಿ ಮಹಿಳೆಯರು ಸಂಕ್ರಾಂತಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಟಿಜಿಎಂಸಿ ಬ್ಯಾಂಕ್‌ನ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವಂತೆ ಧಾನ್ಯಗಳ ರಾಶಿಯನ್ನಿಟ್ಟು ಗಮನಸೆಳೆಯಿತು. ಸಂಜೆಯಾಗುತ್ತಿದ್ದಂತೆ ಹಬ್ಬದ ಸಂಭ್ರಮ, ಸಡಗರ ಹೆಚ್ಚು ಕಳೆಕಟ್ಟಿತು. ಯುವತಿಯರು ಹೊಸ ಬಟ್ಟೆ ತೊಟ್ಟು ನೆರೆಹೊರೆಯವರು, ಸಂಬಂಧಿಕರು ಹಾಗೂ ಸ್ನೇಹಿತರ ಮನೆಗಳಲ್ಲಿ ಪರಸ್ಪರ ಎಳ್ಳುಬೆಲ್ಲ, ಕೊಬ್ಬರಿ, ಕಬ್ಬುಗಳನ್ನು ಹಂಚಿಕೊಂಡು ‘ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತಾಡೊಣ’ ಎಂದು ಶುಭಾಶಯಕೋರಿ ಸಂಭ್ರಮಿಸಿದರು.
ಮಠದಲ್ಲಿ ಅಟವೀ ಶ್ರೀಗಳ ಪುಣ್ಯಸ್ಮರಣೆ: ಸಿದ್ಧಗಂಗಾ ಮಠದಲ್ಲಿ ಪ್ರತಿ ಸಂಕ್ರಾಂತಿ ಹಬ್ಬದಂದು ಶ್ರೀಉದ್ಧಾನ ಶಿವಯೋಗಿಗಳ ಹಾಗೂ ಅಟವೀ ಶ್ರೀಗಳ ಪುಣ್ಯಾರಾಧನೆ ಅಂಗವಾಗಿ ಪುಣ್ಯಸ್ಮರಣೆ ಹಾಗೂ ಗ್ರಾಮಾಂತರ ಬಸವಜಯಂತಿ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಉದ್ದಾನಶ್ರೀಗಳು, ಅಟವೀಶ್ರೀಗಳು ಹಾಗೂ ಬಸವಣ್ಣನವರ ಭಾವಚಿತ್ರಗಳನ್ನು ಪಲ್ಲಕ್ಕಿಯಲ್ಲಿಟ್ಟು ಹಳೆಯಮಠದ ಬಳಿಯ ಉದ್ಧಾನಶಿವಯೋಗಿಗಳ ಗದ್ದುಗೆಯಿಂದ ಮೆರವಣಿಗೆ ಮಾಡಲಾಯಿತು. ಪೂರ್ಣ ಕುಂಭ, ನಂದಿಧ್ವಜ, ವೀರಗಾಸೆ, ಮಂಗಳವಾದ್ಯ, ಜಾನಪದ ಕಲಾ ತಂಡಗಳೊಂದಿಗೆ ಮಠದ ಆವರಣ, ಕ್ಯಾತಸಂದ್ರದ ರೈಲ್ವೆಗೇಟ್ ನಂತರ ಬಂಡೇಪಾಳ್ಯದಲ್ಲಿ ಮೆರವಣಿಗೆ ನಡೆಯಿತು. ಸಿದ್ದಲಿಂಗ ಶ್ರೀಗಳು ಸೇರಿ ವಿವಿಧ ಮಠಾಧೀಶರು, ಭಕ್ತರು, ವಿದ್ಯಾರ್ಥಿಗಳು ಇದ್ದರು.
ಶ್ರೀಗಳ ಗದ್ದುಗೆಗೆ ಅಲಂಕಾರ: ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕಬ್ಬು, ಎಳ್ಳುಬೆಲ್ಲ, ಗೆಣಸು, ಧವಸಧಾನ್ಯಗಳ ಅಲಂಕಾರ ವಿಶೇಷವಾಗಿತ್ತು. ಶ್ರೀಗಳ ಗದ್ದುಗೆಗೆ ಭಕ್ತರ ದಂಡೇ ಹರಿದುಬಂದಿತ್ತು.