

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮ ಪಂಚಾಯಿತಿ 56 ಸದಸ್ಯರನ್ನು ಹೊಂದಿ, ರಾಜ್ಯದಲ್ಲೇ ದೊಡ್ಡ ಗ್ರಾಮ ಪಂಚಾಯಿತಿ ಎನಿಸಿಕೊಂಡಿದೆ. ಇದೀಗ ಈ ಪಂಚಾಯಿತಿಗೆ ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಶಂಕರ ಗಡದೆ ಅಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣಾಧಿಕಾರಿ, ತಾಪಂ ಇಒ ಶಿವಾನಂದ ಕಲ್ಲಾಪುರ ಅವರ ನೇತೃತ್ವದಲ್ಲಿ ಗುರುವಾರ ಜರುಗಿದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶಂಕರ ಗಡದೆ ಹಾಗೂ ಸಂತೋಷ ಕಕಮರಿ ನಾಮಪತ್ರ ಸಲ್ಲಿಸಿದ್ದರು. ಒಟ್ಟು 56 ಸದಸ್ಯರಲ್ಲಿ 53 ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಶಂಕರ ಗಡದೆ 43 ಮತ ಪಡೆದರೆ, ಪ್ರತಿ ಸ್ಪರ್ಧಿ ಸಂತೋಷ ಕಕಮರಿ 10 ಮತ ಪಡೆದು ಪರಾಭವಗೊಂಡರು. ಈ ಮೊದಲು ಅಧ್ಯಕ್ಷರಾಗಿದ್ದ ಸಂತೋಷ ಕಕಮರಿ ಅವಿಶ್ವಾಸ ಗೊತ್ತುವಳಿ ಪರಿಣಾಮ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಕೂತೂಹಲ ಮೂಡಿಸಿದ್ದರು.
ಮುಖಂಡರು ಹಾಗೂ ಗ್ರಾಪಂ ಎಲ್ಲ ಸದಸ್ಯರು ಗುಲಾಲ ಎರಚಿ ಸಂಭ್ರಮಿಸಿದರು. ಸಹಾಯಕ ಚುನಾವಣಾಧಿಕಾರಿ ಜಿ.ಎಂ.ಸ್ವಾಮಿ ಪಾಲ್ಗೊಂಡಿದ್ದರು. ಪಿಡಿಒ ಬೀರಪ್ಪ ಕಡಗಂಚಿ, ಕಾರ್ಯದರ್ಶಿ ರಾಜು ಕರಾಂಡೆ, ಮುಖಂಡರಾದ ಸದಾಶಿವ ಬುಟಾಳೆ, ಶೇಖರ ಕನಕರಡ್ಡಿ, ಸುರೇಶ ಗುಳಪ್ಪನವರ, ಶ್ರೀಶೈಲ ನಾಯಿಕ, ಶಾಂತಿನಾಥ ನಂದೇಶ್ವರ, ಶ್ರೀಶೈಲ ಹಳದಮಳ, ಶ್ರೀಶೈಲ ದಿವಾನಮಳ, ಗುಣವಂತಿ ಸೋಮನ್ನವರ, ಜಯಶ್ರೀ ಮುಗಳಖೋಡ, ಸುಜಾತಾ ನಾಯಕ ಇತರರು ಇದ್ದರು.