

| ವೇಣುವಿನೋದ್ ಕೆ.ಎಸ್. ಮಂಗಳೂರು
ಕೈಯ ತೋರೋ ಕರುಣಿಗಳರಸನೆ ಕೈಯ ತೋರೋ ಕೃಷ್ಣ ಕೈಯಲಿ ತುಂಬ ಬೆಣ್ಣೆ ಕೊಡುವೆ ಕೈಯ ತೋರೋ...
ಸುಶ್ರಾವ್ಯ ಭಜನೆ ಹೇಳುತ್ತ ಬೀದಿಯಲ್ಲಿ ಸಾಗುವ ಗಾಯಕರ ದಂಡು, ಹಾಡಿಗೆ ಅಷ್ಟೇ ಅರ್ಥಪೂರ್ಣವಾಗಿ ನರ್ತಿಸುವಾಕೆಯ ಹೆಜ್ಜೆಯ ಸೊಗಡು..
ಕಳೆದೆರಡು ದಿನಗಳಲ್ಲಿ ವೈರಲ್ ಆಗಿರುವ ಈ ನಗರ ಸಂಕೀರ್ತನೆಯ ತುಣುಕು ನೀವು ನೋಡಿರಬಹುದು. ಇದು ನಡೆದಿರುವುದು ಮೂಡುಬಿದಿರೆ ಸಮೀಪದ ಅಶ್ವತ್ಥಪುರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಸಮೀಪದ ಬೀದಿಯಲ್ಲಿ. ಈ ನಗರ ಸಂಕೀರ್ತನೆ ನಡೆಸಿಕೊಟ್ಟವರು ದೂರದ ಮೈಸೂರಿನಿಂದ ಬಂದ ರಘುಲೀಲಾ ಸ್ಕೂಲ್ ಆಫ್ ಮ್ಯೂಸಿಕ್ನ ತಂಡದವರು.
ಟಿವಿ ಧಾರಾವಾಹಿ ನಟಿ ಅಂಕಿತಾ ಅಮರ್ ಮುಂಚೂಣಿ ನರ್ತಕಿಯಾಗಿ ಫೆ.7ರಂದು ಮುಂಜಾನೆ ನಡೆಸಿದ ಈ ಸಂಕೀರ್ತನೆಯನ್ನು ಜಾಲತಾಣಗಳಲ್ಲಿ ನೋಡಿದವರು ತಲೆತೂಗಿದ್ದಾರೆ. ನಮ್ಮ ಪರಂಪರೆಯ ಮೆರುಗು ಕಟ್ಟಿಕೊಟ್ಟ ತಂಡದ ಸದಸ್ಯರ ಮಾಧುರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೇಸ್ಬುಕ್ - ಟ್ವಿಟರ್ಗಳಲ್ಲಂತೂ ಅನ್ಯಭಾಷಿಗರೂ ಇದಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವುದು ಗಮನಾರ್ಹ.
ಜನ ಈ ರೀತಿ ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಅತ್ತ, ಮೈಸೂರಿನ ರಘುಲೀಲಾ ಸುಗಮ ಸಂಗೀತ ಶಾಲೆಯ ಮುಖ್ಯಸ್ಥೆ ಸುನೀತಾ ಚಂದ್ರಕುಮಾರ್ ನೇತೃತ್ವದ ತಂಡದವರು ಅಶ್ವತ್ಥಪುರ ಊರಿನವರ, ಸೀತಾ ರಾಮಚಂದ್ರ ದೇವಸ್ಥಾನ ಆಡಳಿತ ಮಂಡಳಿಯವರ ಪ್ರೀತಿ, ಗೌರವಕ್ಕೆ ಮಾರುಹೋಗಿದ್ದಾರೆ.
ಸುನೀತಾ ಎಂಬುವರ ತಂಡದಲ್ಲಿ ಅಶ್ವತ್ಥಪುರದಲ್ಲಿ ತವರು ಮನೆ ಇರುವ ಕಲಾವತಿ ಎಂಬ ಮಹಿಳೆ ಇದ್ದಾರೆ. ಅವರ ಒತ್ತಾಯದ ಮೇರೆಗೆ ಅಶ್ವತ್ಥಪುರದಲ್ಲಿ ಈ ಸಂಕೀರ್ತನೆ ನಡೆಸಲು ತೀರ್ಮಾನಿಸಲಾಗಿತ್ತು. ಮೈಸೂರಿನಲ್ಲಿ ಕಳೆದ ಮೂರು ವರ್ಷಗಳಿಂದ ಇಂಥ ಸಂಕೀರ್ತನೆ ನಡೆಸಲಾಗುತ್ತಿದೆ. ಈ ಮೊದಲು ಶೃಂಗೇರಿ, ಉಡುಪಿಯಲ್ಲಿ ಪಲಿಮಾರು ಮಠದ ಪರ್ಯಾಯೋತ್ಸವ ವೇಳೆಯೂ ನಡೆಸಲಾಗಿತ್ತು.
ಸಂಗೀತ ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ ಮೂಡಿಸುವ ಜೊತೆಯಲ್ಲಿ ಸಂಪ್ರದಾಯ ಉಳಿಸುವ ಉದ್ದೇಶದಿಂದ ಇಂಥ ಸಂಕೀರ್ತನೆ ಪ್ರಾರಂಭಿಸಿದ್ದೆ. ಮೈಸೂರಿನಲ್ಲಿ ಪ್ರತಿ ತಿಂಗಳ ಮೊದಲ ಭಾನುವಾರ ಮುಂಜಾನೆ ಒಂದು ದೇವಸ್ಥಾನದಿಂದ ಇನ್ನೊಂದು ದೇವಸ್ಥಾನಕ್ಕೆ ಈ ರೀತಿ ಸಂಕೀರ್ತನೆ ನಡೆಸಲಾಗುತ್ತಿದೆ. ಆದರೆ ಅಶ್ವತ್ಥಪುರದಲ್ಲಿ ನಡೆದ ಸಂಕೀರ್ತನೆಗೆ ಸಿಕ್ಕಿದ ಸ್ಪಂದನೆ, ಅದರ ವಿಡಿಯೋ ವೈರಲ್ ಆಗಿರುವ ಪ್ರಮಾಣ ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಮುಖ್ಯಸ್ಥೆ ಸುನೀತಾ ಚಂದ್ರಕುಮಾರ್.
ಅಶ್ವತ್ಥಪುರದ ಜನರ ಪ್ರೀತಿ ಮರೆಯಲಾಗದು, ಫೆ.6ರಂದು ಸಾಯಂಕಾಲ 2 ಬಸ್ಗಳಲ್ಲಿ 65 ಮಂದಿ ಮೈಸೂರಿನಿಂದ ಬಂದಿಳಿದೆವು, ದೇವಸ್ಥಾನದ ಪ್ರಾಂಗಣದೊಳಗೆ ರಾತ್ರಿ ಹಾಡಿದೆವು, ಅದನ್ನು ಜನ ಕೇಳಿದ ರೀತಿ ಅನನ್ಯ. ಮರುದಿನ ನಗರ ಸಂಕೀರ್ತನೆ ವೇಳೆ ಜನ ತಮ್ಮ ಮನೆ ಮುಂದೆ ರಂಗವಲ್ಲಿ ಹಾಕಿದ್ದಲ್ಲದೆ ನಿಂತು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಮ್ಮನ್ನು ಮಾತನಾಡಿಸಿ ಖುಷಿ ಪಟ್ಟಿದ್ದು ನಮ್ಮೆಲ್ಲ ಸದಸ್ಯರಿಗೆ ವಿಶೇಷ ಅನುಭವ ಎನ್ನುತ್ತಾರೆ ಕಲಾವತಿ.
ನಗರ ಸಂಕೀರ್ತನೆಯನ್ನು ಕಮರ್ಷಿಯಲ್ ಆಗಿ ನಡೆಸುವ ಉದ್ದೇಶವಿಲ್ಲ. ಹಾಗೆ ಮಾಡಲು ಹೋದರೆ ನಮ್ಮ ಮೂಲ ಉದ್ದೇಶ ವಿಫಲವಾಗಬಹುದು. ಅಶ್ವತ್ಥಪುರದಲ್ಲಿ ಆಗಿರುವ ನಗರ ಸಂಕೀರ್ತನೆ ಅತ್ಯಂತ ಸ್ಮರಣೀಯ.| ಸುನೀತಾ ಚಂದ್ರಕುಮಾರ್ ಮುಖ್ಯಸ್ಥೆ, ರಘುಲೀಲಾ ಸುಗಮ ಸಂಗೀತ ಶಾಲೆ, ಮೈಸೂರು