24ರಂದು ಬೃಹತ್ ಸಂಕೀರ್ತನಾ ಯಾತ್ರೆ: ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಮಾರ್ಕಂಡೇಯ ಮಾಹಿತಿ

Sankirtana Yatra Hindu Jagran Forum Press Conference Mandya
Published on

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಡಿ.24ರಂದು ಮೂಡಲಬಾಗಿಲು ಆಂಜನೇಯಸ್ವಾಮಿ ಸಂಕಲ್ಪ ಮಾಲಾಧಾರಣೆ ಮಹೋತ್ಸವ ಹಾಗೂ ಬೃಹತ್ ಸಂಕೀರ್ತನಾ ಯಾತ್ರೆ ಆಯೋಜಿಸಲಾಗಿದೆ ಎಂದು ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಮಾರ್ಕಂಡೇಯ ತಿಳಿಸಿದರು.

ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಡಿ.17ರಿಂದ ಮೂಡಲಬಾಗಿಲು ಆಂಜನೇಯಸ್ವಾಮಿ ಮಾಲಾಧಾರಣೆ ಪ್ರಾರಂಭವಾಗಲಿದೆ. ಅಂತಿಮವಾಗಿ 24ರಂದು ಶ್ರೀರಂಗಪಟ್ಟಣಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ 10ಗಂಟೆಗೆ ನಿಮಿಷಾಂಬ ದೇವಾಲಯದಿಂದ ಶ್ರೀರಂಗನಾಥಸ್ವಾಮಿ ದೇವಸ್ಥಾನದವರೆಗೆ ಮಾಲಾಧಾರಿಗಳಿಂದ ಬೃಹತ್ ಸಂಕೀರ್ತನಾ ಯಾತ್ರೆ ಮಾಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯು ಟಿಪ್ಪು ಆಳ್ವಿಕೆಗೂ ಮುನ್ನ ಮೂಡಲಬಾಗಿಲು ಆಂಜನೇಯಸ್ವಾಮಿಯ ದೇವಾಲಯವಾಗಿತ್ತು. ಇದಕ್ಕೆ ಸಾಕಷ್ಟು ದಾಖಲೆಗಳಿವೆ. ಆದರೆ, ಟಿಪ್ಪು ತನ್ನ ಆಳ್ವಿಕೆಯಲ್ಲಿ ದೇವಾಲಯವನ್ನು ಒಡೆದು, ಮಸೀದಿಯಾಗಿ ಮಾರ್ಪಡಿಸಿದನು. ಹೊಳೆಗೆ ಬೀಸಾಡಲ್ಪಟ್ಟಿದ್ದ ದೇವರ ಮೂರ್ತಿಯನ್ನು ಅರ್ಚಕರೊಬ್ಬರು ಬೇರೆ ಸ್ಥಳದಲ್ಲಿ ಮರು ಸ್ಥಾಪಿಸಿದ್ದರು. ಆದ್ದರಿಂದ ಆ ಜಾಗ ಮತ್ತೆ ದೇವಾಲಯವಾಗಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.

ಮೂಲಸ್ಥಾನಕ್ಕೆ ಹನುಮನ ವಿಗ್ರಹ ಪ್ರತಿಷ್ಠಾಪನೆಯಾಗಬೇಕು ಎಂಬುದು ಹಿಂದು ಸಮಾಜದ ಸಂಕಲ್ಪ. ಈ ಹಿನ್ನಲೆಯಲ್ಲಿ ಹಲವು ವರ್ಷದಿಂದ ಪ್ರತಿ ವರ್ಷ ಮೂಡಲಬಾಗಿಲು ಆಂಜನೇಯಸ್ವಾಮಿ ಸಂಕಲ್ಪ ಮಾಲಾಧಾರಣೆ ನಡೆಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವೂ 20 ಸಾವಿರಕ್ಕೂ ಹೆಚ್ಚು ಜನ ಮಾಲಾಧಾರಿಗಳು ಸಂಕೀರ್ತನಾ ಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ವಿವರಿಸಿದರು.

ವೇದಿಕೆಯ ಯೋಗಾನಂದ, ಶ್ಯಾಂಸುಂದರ್, ಕಿರುಗಾವಲು ಸೃಜನ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net