

ವಿಜಯಪುರ : ನಗರದ ಶ್ರೀ ಕೃಷ್ಣ ಗೀತಾ ಗ್ರೂಪ್ ವತಿಯಿಂದ ನಗರದ ವಿವಿಧೆಡೆ ಭಾನುವಾರ ಗೀತಾ ಗ್ರಾಮ ಸಂಕೀರ್ತನ ನಡೆಯಿತು.
ಸಮಾಜದ ಎಲ್ಲ ವರ್ಗದ ಮಕ್ಕಳಿಗೆ ಭಗವದ್ಗೀತೆ ಕಂಠ ಪಾಠ ಮಾಡಿಸಿ ಅದರ ಮಹತ್ವ ತಿಳಿಸುವ ಜತೆಗೆ ಮಕ್ಕಳನ್ನು ಉತ್ತಮ ಸಂಸ್ಕಾರವಂತರನ್ನಾಗಿ ಮಾಡುವ ಉದ್ದೇಶದಿಂದ ಸುರೇಂದ್ರ ಮುತಾಲಿಕ ನೇತೃತ್ವದಲ್ಲಿ ಸಂಕೀರ್ತನ ಆಯೋಜಿಸಲಾಗಿತ್ತು.
ಅಭಿಯಾನ ಗ್ಯಾನಿ ಪ್ಲಾಟ್ನ ಪ್ರಸನ್ನ ಗಣಪತಿ ದೇವಸ್ಥಾನದಿಂದ ಆರಂಭವಾಗಿ ಕಾವಿ ಪ್ಲಾಟ್ನಲ್ಲಿರುವ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಸಂಕೀರ್ತನದಲ್ಲಿ ಭಾಗಿಯಾದ ಮಕ್ಕಳು ಭಿತ್ತಿಚಿತ್ರ, ಪ್ಲೇ ಕಾರ್ಡ್ ಹಿಡಿದು ಗೀತೆಯ ಶ್ಲೋಕ ಪಠಿಸಿದರು. ಗ್ಯಾನಿ ಪ್ಲಾಟ್, ಮುಕುಂದನಗರ ಮತ್ತು ಕಾವಿ ಪ್ಲಾಟ್ಗಳಲ್ಲಿ ಸಂಚರಿಸಿದ ಗ್ರಾಮ ಸಂಕೀರ್ತನದ ದಾರಿಯುದ್ದಕ್ಕೂ ನಾಗರಿಕರು ಆರತಿ ಮತ್ತು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು.
ನಂತರ ನಡೆದ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಪಂ. ಸಂಜೀವ ಆಚಾರ್ಯ ಬುರ್ಲಿ ವಹಿಸಿದ್ದರು.
ಪಾಲಿಕೆ ಸದಸ್ಯ ಜವಾಹರ ಗೋಸಾಯಿ, ಗಿರೀಶ ಝಳಕಿ, ಅಣ್ಣಾಚಾರ್ಯ ಆದ್ಯ, ಮನೋಜ ಗಿರಗಾಂವಿ, ಡಾ. ಸಂಜೀವ ಜೋಶಿ, ಗುರುರಾಜ ಕುಲಕರ್ಣಿ, ಪ್ರಮೋದ ಕೌಜಲಗಿ, ವಿನಾಯಕ ದಿತ, ಗೋಪಾಲ ಕುಲಕರ್ಣಿ ಇದ್ದರು.