

ಮೈಸೂರು: ಬ್ರಾಹ್ಮಣರಲ್ಲಿ ಸಂಕೇತಿಗಳೇ ಉತ್ತಮವಾದ ಬ್ರಾಹ್ಮಣರು. ಯಾವ ಕೆಲಸವಾದರೂ ಅವರು ಅಚ್ಚುಕಟ್ಟಾಗಿ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಸಂಕೇತಿಗಳು ಮಾದರಿಯಾಗಿದ್ದಾರೆ ಎಂದು ಸಾಹಿತಿ ಎಸ್.ಎಲ್. ಭೈರಪ್ಪ ಹೇಳಿದರು.
ವಿಶ್ವ ಸಂಕೇತಿ ಭಾರತಿ ಟ್ರಸ್ಟ್ ವತಿಯಿಂದ ಜಯನಗರದ ನಾಚಾರಮ್ಮ ಭವನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಸಂಕೇತಿ ಬರಹಗಾರರ ರಾಜ್ಯಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿ, ಸಂಕೇತಿಗಳಲ್ಲಿ ಆತ್ಮವಿಶ್ವಾಸ ಹೆಚ್ಚು. ಸಂಕೇತಿಗಳು ಯಾರ ಮೇಲೂ ಅವಲಂಬನೆಯಾಗದೆ ಬದುಕನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಈ ಕಾರಣಕ್ಕೆ ಸಂಕೇತಿಗಳು ಈ ಹಿಂದೆ ಸರ್ಕಾರಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಸರ್ಕಾರವನ್ನು ಅವಲಂಬಿಸದೆ ಬದುಕನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಅವರಲ್ಲಿ ಇದೆ ಎಂದು ಹೇಳಿದರು.
ಸಂಕೇತಿಗಳು ಪರಸ್ಪರ ಭೇಟಿಯಾದಾಗ ಸಂಕೇತಿ ಭಾಷೆಯಲ್ಲಿಯೇ ಮಾತನಾಡುತ್ತಾರೆ. ತಮ್ಮ ಭಾಷೆ, ಸಂಸ್ಕೃತಿ ಉಳಿಸುವಲ್ಲಿ ಸಂಕೇತಿಗಳು ಮುಂಚೂಣಿಯಲ್ಲಿ ಇದ್ದಾರೆ. ಸಂಕೇತಿಗಳು ತಮ್ಮದೇ ಆದ ಭಾಷೆ ಹೊಂದಿದ್ದರೂ ಅವರು ಕನ್ನಡ ಭಾಷೆಯ ಮೇಲೆ ಹೆಚ್ಚಿನ ಹಿಡಿತವನ್ನು ಹೊಂದಿದ್ದಾರೆ. ಕನ್ನಡದ ಆಡು ಭಾಷೆಯಲ್ಲೂ ಸಾಹಿತ್ಯ ರಚನೆ ಮಾಡುವ ಸಾಮರ್ಥ್ಯವನ್ನು ಸಂಕೇತಿಗಳು ಹೊಂದಿದ್ದಾರೆ ಎಂದರು.
ಹಿರಿಯ ವಿದ್ವಾಂಸ ಪ್ರಧಾನ ಗುರುದತ್, ಸಮ್ಮೇಳನಾಧ್ಯಕ್ಷ ಡಾ.ಕೆ. ಅನಂತರಾಮು, ವಿಶ್ವ ಸಂಕೇತಿ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ.ಬಿ. ಭಾನುಪ್ರಕಾಶ್, ಶಾಸಕ ಟಿ.ಎಸ್. ಶ್ರೀವತ್ಸ, ಮೈಸೂರು ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎನ್. ಪದ್ಮನಾಭ, ಕೌಶಿಕ ಸಂಕೇತಿ ಸಂಘದ ಅಧ್ಯಕ್ಷ ಎಚ್.ಎಸ್. ಅನಂತಪದ್ಮನಾಭ, ಕಾರ್ಯದರ್ಶಿ ಪಿ.ಎಸ್.ಎನ್. ಮೂರ್ತಿ, ಬೆಟ್ಟದಪುರ ಸಂಕೇತಿ ಸಂಘದ ಅಧ್ಯಕ್ಷ ಎಸ್.ಎನ್. ಅನ್ನಪೂರ್ಣ, ಸಮ್ಮೇಳನದ ಸಂಚಾಲಕರಾದ ಸಂಸ್ಕೃತಿ ಸುಬ್ರಹ್ಮಣ್ಯ, ಹೊಸಹಳ್ಳಿ ಎಸ್.ನಾಗರಾಜ ಹಾಗೂ ಇತರರು ಇದ್ದರು.